ADVERTISEMENT

ಇಂಧನ ಪೂರೈಕೆ ಸ್ಥಗಿತಗೊಳಿಸಿದ್ರಾ..: ಪೈಲಟ್‌ಗಳ ಸಂಭಾಷಣೆ ಬಹಿರಂಗ

ಪಿಟಿಐ
Published 12 ಜುಲೈ 2025, 6:22 IST
Last Updated 12 ಜುಲೈ 2025, 6:22 IST
   

ನವದೆಹಲಿ: ಶುಕ್ರವಾರ ತಡರಾತ್ರಿ ಬಿಡುಗಡೆಯಾದ ಅಹಮದಾಬಾದ್‌ ವಿಮಾನ ದುರಂತಕ್ಕೆ ಸಂಬಂಧಪಟ್ಟ ಪ್ರಾಥಮಿಕ ವರದಿಯಲ್ಲಿ ಹಲವು ಅಂಶಗಳು ಬಹಿರಂಗಗೊಂಡಿವೆ. ಪೈಲಟ್‌ಗಳ ಸಂಭಾಷಣೆಯಲ್ಲಿ ಅವರ ನಡುವೆ ಗೊಂದಲವಿರುವುದು ಸ್ಪಷ್ಟವಾಗಿದೆ.

‌ವರದಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿರುವ ವಿಮಾನ ಅಪಘಾತಗಳ ತನಿಖಾ ಸಂಸ್ಥೆ(ಎಎಐಬಿ), ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿರುವುದು ದುರಂತಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದೆ. ಆದರೆ, ಪೈಲಟ್‌ಗಳ ತಪ್ಪಿನಿಂದ ಪತನಗೊಂಡಿತೇ? ಅಥವಾ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿತೇ? ಎಂಬ ಬಗ್ಗೆ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ.

ವಿಮಾನ ದುರಂತದ ಸಂದರ್ಭ ಪೈಲಟ್‌ಗಳ ನಡುವೆ ನಡೆದ ಸಂಭಾಷಣೆ ರೆಕಾರ್ಡ್‌ ಆಗಿದ್ದು, ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಸಂದರ್ಭ ಸಹ ಪೈಲಟ್‌ ವಿಮಾನ ಚಲಾಯಿಸುತ್ತಿದ್ದು, ಕ್ಯಾಪ್ಟನ್‌ ಮೇಲ್ವಚಾರಣೆ ನೋಡಿಕೊಳ್ಳುತ್ತಿದ್ದರು.

ADVERTISEMENT

ವಿಮಾನ ಟೇಕಾಫ್‌ ಆದ ಕೆಲವು ಸೆಕೆಂಡುಗಳಲ್ಲಿ ಎಂಜಿನ್‌ ಸೂಚಕಗಳು ‘ರನ್‌’ ಬದಲು ‘ಕಟ್‌ ಆಫ್‌’ ಎಂದು ತೋರಿಸಿವೆ. ಇದನ್ನು ಗಮನಿಸಿದ ಒಬ್ಬ ಪೈಲಟ್‌, ‘ಇಂಧನ ಪೂರೈಕೆ ಸ್ಥಗಿತಗೊಳಿಸಿದ್ರಾ?’ ಎಂದು ಕೇಳಿದ್ದಾರೆ. ಅದಕ್ಕೆ ಮತ್ತೊಬ್ಬ ಪೈಲಟ್‌, ‘ನಾನು ಹಾಗೆ ಮಾಡಿಲ್ಲ’ ಎಂದು ಉತ್ತರಿಸಿದ್ದಾರೆ.

ಸಂಭಾಷಣೆ ನಡೆದ ಕೆಲ ಸೆಕೆಂಡುಗಳಲ್ಲಿ ಪೈಲಟ್‌ ಒಬ್ಬರು ‘ಮೇ ಡೇ’ ಕೂಗಿದ್ದಾರೆ. ಅದಾದ ಸೆಕೆಂಡಿನಲ್ಲಿ ವಿಮಾನ ವೈದ್ಯಕೀಯ ಕಾಲೇಜು ಕಟ್ಟಡದ ಮೇಲೆ ಅಪ್ಪಳಿಸಿತ್ತು. ಘಟನೆಯಲ್ಲಿ 260 ಜನ ಪ್ರಾಣ ಕಳೆದುಕೊಂಡಿದ್ದರು.

ಅನುಭವಿಗಳಾಗಿದ್ದ ಪೈಲಟ್‌ಗಳು:

ದುರಂತ ನಡೆದ ಏರ್‌ ಇಂಡಿಯಾ ವಿಮಾನದಲ್ಲಿದ್ದ ಪೈಲಟ್‌ಗಳಿಬ್ಬರು 9,300 ಗಂಟೆಗಳ ಕಾಲ ವಿಮಾನ ಹಾರಿಸಿದ್ದ ಅನುಭವ ಹೊಂದಿದ್ದರು. ಕ್ಯಾಪ್ಟನ್‌ ಸುಮಿತ್‌ ಸಭರ್ವಾಲ್‌ ಅವರು 8,200 ಗಂಟೆ, ಸಹ ಪೈಲಟ್‌ ಆಗಿದ್ದ ಕ್ಲೈವ್‌ ಕುಂದರ್‌ 1,100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು.

ಸಭರ್ವಾಲ್‌ ಅವರು (ಲೈನ್‌ ಟ್ರೇನಿಂಗ್‌ ಕ್ಯಾಪ್ಟನ್‌–ಎಲ್‌ಟಿಸಿ) ಹೊಸ ಪೈಲಟ್‌ಗಳಿಗೆ ತರಬೇತಿ ನೀಡುವ ಪ್ರಮಾಣೀಕೃತ ಅನುಭವಿ ಪೈಲಟ್‌ ಕೂಡ ಆಗಿದ್ದರು. ಬೋಯಿಂಗ್‌ 787 ಡ್ರೀಮ್‌ಲೈನರ್‌ ವಿಮಾನವು ಮೊದಲ ಸಲ ಬಂದಿಳಿದ ವೇಳೆ ಆ ವಿಮಾನದಲ್ಲಿ ಇದ್ದ ಪೈಲಟ್‌ಗಳಲ್ಲಿ ಕ್ಯಾಪ್ಟನ್‌ ಸಭರ್ವಾಲ್‌ ಕೂಡ ಒಬ್ಬರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.