ADVERTISEMENT

ಬಂಗಾಳದ ಮಹಿಳೆಗೆ ಅವಮಾನ: ಮೋದಿಯ ದೀದಿ, ಓ ದೀದಿ ಹೇಳಿಕೆಗೆ ಭಾರಿ ಆಕ್ಷೇಪ

ಪಿಟಿಐ
Published 4 ಏಪ್ರಿಲ್ 2021, 17:48 IST
Last Updated 4 ಏಪ್ರಿಲ್ 2021, 17:48 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಅವಹೇಳನಕಾರಿಯಾಗಿ ‘ದೀದಿ ಓ ದೀದಿ, ದೀದಿ ಓ ದೀದಿ’ ಎಂದು ಕರೆದಿರುವುದು ಆಕ್ಷೇಪಾರ್ಹ. ಇದು ಮಮತಾ ಬ್ಯಾನರ್ಜಿ ಅವರಿಗೆ ಮಾಡಿದ ಅಪಮಾನ ಮಾತ್ರವಲ್ಲ, ಬದಲಿಗೆ ಬಂಗಾಳದ ಎಲ್ಲಾ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಟಿಎಂಸಿ ಆರೋಪಿಸಿದೆ.

ಮೋದಿ ಅವರು, ‘ದೀದಿ, ಓ ದೀದಿ’ ಎಂದು ಕರೆದಿರುವ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ.

‘ನಮ್ಮ ಮುಖ್ಯಮಂತ್ರಿಯನ್ನು ಬಿಜೆಪಿ ಹೇಗೆ ಅವಮಾನಿಸುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೆ. ಪ್ರಧಾನಿ ಮತ್ತು ಅಮಿತ್ ಶಾ ಅವರು ಮಹಿಳಾ ವಿರೋಧಿ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂಬುದಕ್ಕೆ ಇದು ಸಾಕ್ಷಿ. ಮೋದಿ ಮತ್ತು ಶಾ ಅವರಿಗೆ ಪ್ರತಿಕ್ರಿಯೆ ನೀಡುವುದನ್ನು ನಾವು ಬಂಗಾಳದ ಜನತೆಗೆ ಬಿಟ್ಟಿದ್ದೇವೆ’ ಎಂದು ಪಶ್ಚಿಮ ಬಂಗಾಳ ಸಚಿವೆ ಶಶಿ ಪಂಜಾ ಹೇಳಿದ್ದಾರೆ.

ADVERTISEMENT

ಮೋದಿ ಅವರ ಈ ವಿಡಿಯೊ ತುಣುಕಿನ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಹ ಈಚೆಗೆ ಹೇಳಿದ್ದರು. ‘ಬಂಗಾಳದಲ್ಲಿ ಬೀದಿಬದಿಯಲ್ಲಿ ಕೂತ ಪುಂಡರು, ಮಹಿಳೆಯರನ್ನು ರೇಗಿಸುವ ರೀತಿಯಲ್ಲಿ ಮೋದಿ ಅವರು ಮಮತಾ ದೀದಿ ಅವರನ್ನು ಸಂಬೋಧಿಸಿದ್ದಾರೆ’ ಎಂದು ಮೊಯಿತ್ರಾ ಕಿಡಿಕಾರಿದ್ದರು.

ಮೋದಿ ಅವರದ್ದು ಪುರುಷಪ್ರಧಾನ ಮನಸ್ಥಿತಿ ಎಂಬುದನ್ನು ಇಂತಹ ಹೇಳಿಕೆಗಳೇ ಸಾಬೀತು ಮಾಡುತ್ತವೆ ಎಂದು ಟಿಎಂಸಿ ನಾಯಕಿ ಅನನ್ಯಾ ಚಕ್ರವರ್ತಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.