ಪ್ರಧಾನಿ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ
ಕೋಲ್ಕತ್ತ: ಪಶ್ಚಿಮ ಬಂಗಾಳದ ಪ್ರವಾಹ ಪೀಡಿತ ಉತ್ತರ ಬಂಗಾಳದಲ್ಲಿ ಇಬ್ಬರು ಬಿಜೆಪಿ ನಾಯಕರ ಮೇಲೆ ಹಲ್ಲೆ ನಡೆದಿದೆ. ಇದೇ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಉತ್ತರ ಬಂಗಾಳದಾದ್ಯಂತ ಧಾರಾಕಾರ ಮಳೆಯಿಂದ ಭೂಕುಸಿತ ಮತ್ತು ಪ್ರವಾಹ ಉಂಟಾಗಿ 30 ಜನರು ಮೃತಪಟ್ಟಿದ್ದು, ಹಲವರು ಕಾಣೆಯಾಗಿದ್ದಾರೆ. ಇದರ ನಡುವೆ ಸೋಮವಾರ ಜಲಪೈಗುರಿ ಜಿಲ್ಲೆಯ ನಾಗರಾಕಾಟಾದ ದೋರ್ಸ್ ಪ್ರದೇಶಕ್ಕೆ ಭೇಟಿ ನೀಡಿದ ಬಿಜೆಪಿ ಸಂಸದ ಖಗೇನ್ ಮುರ್ಮು, ಶಾಸಕ ಶಂಕರ್ ಘೋಷ್ ಅವರ ಮೇಲೆ ಗುಂಪೊಂದು ತೀವ್ರವಾಗಿ ದಾಳಿ ನಡೆಸಿತ್ತು.
ಘಟನೆ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ‘ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಟಿಎಂಸಿ ಸರ್ಕಾರ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ‘ಬಿಜೆಪಿ ನಾಯಕರು ನೈಸರ್ಗಿಕ ವಿಕೋಪವನ್ನು ರಾಜಕೀಯಗೊಳಿಸುತ್ತಿದ್ದಾರೆ’ ಎಂದು ಮಮತಾ ತಿರುಗೇಟು ನೀಡಿದ್ದಾರೆ.
‘ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರಿಗೆ ಸೇವೆ ಸಲ್ಲಿಸುತ್ತಿದ್ದ ನಮ್ಮ ಪಕ್ಷದ ಸಂಸದರು ಮತ್ತು ಶಾಸಕರ ಮೇಲೆ ನಡೆದಿರುವ ಹಲ್ಲೆ ಆಘಾತಕಾರಿ. ಇದು ಟಿಎಂಸಿಯ ಸಂವೇದನಾ ಶೂನ್ಯತೆ ಮತ್ತು ರಾಜ್ಯದಲ್ಲಿನ ಸಂಪೂರ್ಣ ಹದಗೆಟ್ಟ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ’ ಎಂದು ಟಿಎಂಸಿ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.
‘ಸರಿಯಾದ ತನಿಖೆಯ ವರದಿಗೆ ಕಾಯದೇ ಪ್ರಧಾನಿಯವರು ನೈಸರ್ಗಿಕ ವಿಕೋಪವನ್ನು ರಾಜಕೀಯಗೊಳಿಸಲು ಮುಂದಾಗಿರುವುದು ದುರದೃಷ್ಟಕರ. ಅವರು (ಮೋದಿ) ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಟಿಎಂಸಿ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ನೇರ ಆರೋಪವನ್ನು ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆಯೇ ಹೊರತು, ರಾಜಕೀಯ ವೇದಿಕೆಯಿಂದ ಮಾಡುವ ಟ್ವೀಟ್‌ನಿಂದಲ್ಲ’ ಎಂದು ಮಮತಾ ಬ್ಯಾನರ್ಜಿ ಅವರು ಮೋದಿ ಹೇಳಿಕೆಗೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಹಲ್ಲೆಗೊಳಗಾದ ಶಾಸಕ ಶಂಕರ್ ಘೋಷ್ ಅವರು ಹಂಚಿಕೊಂಡ ವಿಡಿಯೊಗಳಲ್ಲಿ ಸಂಸದ ಮುರ್ಮು ಅವರ ಮುಖ ಮತ್ತು ಮೂಗಿನಿಂದ ರಕ್ತ ಸುರಿಯುತ್ತಿರುವುದನ್ನು ಕಾಣಬಹುದಾಗಿದೆ. ‘ಟಿಎಂಸಿ ಬೆಂಬಲಿತ ಸ್ಥಳೀಯರು ನಮ್ಮನ್ನು ಕಾಲಿನಿಂದ ಒದ್ದು, ಕಲ್ಲು ತೂರಾಟ ನಡೆಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.