ADVERTISEMENT

ಜಿನ್ನಾಗೆ ಮಣಿದಿದ್ದ ನೆಹರೂ, ವಂದೇ ಮಾತರಂ ಗೀತೆ ತುಂಡರಿಸಿದ್ದು ಕಾಂಗ್ರೆಸ್: ಮೋದಿ

ಪಿಟಿಐ
Published 8 ಡಿಸೆಂಬರ್ 2025, 12:26 IST
Last Updated 8 ಡಿಸೆಂಬರ್ 2025, 12:26 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ನವದೆಹಲಿ: ‌ಸಾಮಾಜಿಕ ಸಾಮರಸ್ಯದ ನೆಪದಲ್ಲಿ ಕಾಂಗ್ರೆಸ್, ‘ವಂದೇ ಮಾತರಂ’ ಗೀತೆಯನ್ನು ತುಂಡು ತುಂಡಾಗಿ ಒಡೆದು ಹಾಕಿದ್ದಲ್ಲದೆ ಈಗಲೂ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

‘ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವ ಕುರಿತಂತೆ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಮಾತನಾಡಿದ್ದಾರೆ.

ADVERTISEMENT

ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ‘ವಂದೇ ಮಾತರಂ’ ಗೀತೆಯನ್ನು ವಿರೋಧಿಸಿದ್ದರು. 1937ರಲ್ಲಿ ಕಾಂಗ್ರೆಸ್, ‘ವಂದೇ ಮಾತರಂ’ ಗೀತೆಯ ಪ್ರಮುಖ ಸಾಲುಗಳನ್ನು ತೆಗೆದುಹಾಕುವ ಮೂಲಕ ದೇಶ ವಿಭಜನೆಯ ಬೀಜ ಬಿತ್ತಿತ್ತು ಎಂದೂ ಅವರು ಆರೋಪಿಸಿದ್ದಾರೆ.

‘ಲಖನೌದಲ್ಲಿ ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್, ‘ವಂದೇ ಮಾತರಂ’ ಗೀತೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ಆದರೆ, ಕಾಂಗ್ರೆಸ್ ಮತ್ತು ಜವಾಹರಲಾಲ್ ನೆಹರೂ ಅವರು ಅದನ್ನು ವಿರೋಧಿಸುವ ಬದಲು, ವಂದೇ ಮಾತರಂ ಗೀತೆಯನ್ನು ಪರಿಶೀಲಿಸಲು ಮುಂದಾಗಿದ್ದರು’ ಎಂದು ಮೋದಿ ಗುಡುಗಿದ್ದಾರೆ.

ಜಿನ್ನಾ ಅವರು ‘ವಂದೇ ಮಾತರಂ’ ಗೀತೆಯನ್ನು ವಿರೋಧಿಸಿದ ನಂತರ, ಜವಾಹರಲಾಲ್ ನೆಹರೂ ಅವರು ಸುಭಾಷ್ ಚಂದ್ರ ಬೋಸ್‌ ಅವರಿಗೆ ಬರೆದ ಪತ್ರದಲ್ಲಿ, ವಂದೇ ಮಾತರಂ ಗೀತೆಯ ಹಿನ್ನೆಲೆಯನ್ನು ಓದಿದ್ದೇನೆ ಮತ್ತು ಅದು ಮುಸ್ಲಿಮರಲ್ಲಿ ದ್ವೇಷ ಬಿತ್ತಬಹುದೆಂದು ಹೇಳಿದ್ದರು' ಎಂದು ಮೋದಿ ಉಲ್ಲೇಖಿಸಿದ್ದಾರೆ.

‘ವಂದೇ ಮಾತರಂ’ ಗೀತೆಯ ವಿಷಯದಲ್ಲಿ ಕಾಂಗ್ರೆಸ್ ರಾಜಿ ಮಾಡಿಕೊಂಡಿತ್ತು. ಅವರು (ಕಾಂಗ್ರೆಸ್ಸಿಗರು) ಸಾಮಾಜಿಕ ಸಾಮರಸ್ಯದ ಮುಖವಾಡದಡಿಯಲ್ಲಿ ರಾಷ್ಟ್ರಗೀತೆಯ ಕೆಲವು ಭಾಗಗಳನ್ನು ತೆಗೆದು ಹಾಕಿದ್ದರು. ಓಲೈಕೆ ರಾಜಕಾರಣದ ಭಾಗವಾಗಿ ‘ವಂದೇ ಮಾತರಂ’ ಗೀತೆಯನ್ನು ವಿಭಜಿಸಲು ಒಪ್ಪಿಕೊಂಡಿದ್ದರು ಎಂದೂ ಮೋದಿ ಟೀಕಿಸಿದ್ದಾರೆ.

‘ವಂದೇ ಮಾತರಂ’ ಎಷ್ಟು ಜನಪ್ರಿಯವಾಗಿದೆಯೆಂದರೆ ಅದು ರಾಷ್ಟ್ರೀಯ ಗೀತೆಯಾಗಿ ಹೊರಹೊಮ್ಮಿದೆ ಎಂದು 1905ರಲ್ಲಿ ಮಹಾತ್ಮ ಗಾಂಧಿಯವರು ಬರೆದಿದ್ದರು. ಆದರೆ, ಇಂದು ಗೀತೆಯ ಬಗ್ಗೆ ಮಹಾತ್ಮ ಗಾಂಧಿ ಹೊಂದಿದ್ದ ಆಶಯಗಳನ್ನು ಕಾಂಗ್ರೆಸ್ ಹೊಸಕಿ ಹಾಕಿದೆ ಎಂದು ಮೋದಿ ಕುಟುಕಿದ್ದಾರೆ.

ರಾಷ್ಟ್ರೀಯ ಗೀತೆ ವಂದೇ ಮಾತರಂಗೆ 50 ವರ್ಷ ತುಂಬಿದಾಗ ದೇಶವು ವಸಾಹತುಶಾಹಿಯ ಅಡಿಯಲ್ಲಿ ತತ್ತರಿಸುತಿತ್ತು. 100 ವರ್ಷವಾದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಆಗ, ದೇಶಭಕ್ತಿ ಹೊಂದಿದ್ದ, ರಾಷ್ಟ್ರಕ್ಕಾಗಿ ಪ್ರಾಣ ಸಮರ್ಪಿಸಲು ಸಿದ್ದರಿದ್ದವರು ಜೈಲಿನಲ್ಲಿ ಬಂಧಿಯಾಗಿದ್ದರು. ಅದು ನಮ್ಮ ಇತಿಹಾಸದ ಕರಾಳ ಅಧ್ಯಾಯ ಎಂದು ಮೋದಿ ವಿಷಾಧ ವ್ಯಕ್ತಪಡಿಸಿದ್ದಾರೆ.

ಬ್ರಿಟಿಷ್ ದಬ್ಬಾಳಿಕೆಯ ಹೊರತಾಗಿಯೂ ‘ವಂದೇ ಮಾತರಂ’ ಗೀತೆ ಬಂಡೆಯಂತೆ ನಿಂತು ಏಕತೆಗೆ ಪ್ರೇರಣೆ ನೀಡಿತು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.