ನವದೆಹಲಿ: ದೇಶದಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
‘ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಬೆಳಕಿನ ಹಬ್ಬವು ನಮ್ಮೆಲ್ಲರ ಜೀವನವನ್ನು ಸಾಮರಸ್ಯ, ಸಂತೋಷ ಮತ್ತು ಸಮೃದ್ಧಿಯಿಂದ ಬೆಳಗಿಸಲಿ. ನಮ್ಮ ಸುತ್ತಲೂ ಸಕಾರಾತ್ಮಕತೆಯ ಮನೋಭಾವ ನೆಲೆಸಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ‘ದೀಪಾವಳಿಯ ಶುಭ ಸಂದರ್ಭದಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಎಲ್ಲರಿಗೂ ಸತ್ಯ, ಸನಾತನ, ಸದ್ಗುಣ ಮತ್ತು ಸಕಾರಾತ್ಮಕತೆಯ ಸಂಕೇತವಾದ ದೀಪಾವಳಿ ಹಬ್ಬ ಶುಭಾಶಯಗಳು. ದೀಪೋತ್ಸವವು ಕೇವಲ ದೀಪಗಳನ್ನು ಬೆಳಗಿಸುವ ಆಚರಣೆಯಲ್ಲ. ಬದಲಾಗಿ ನಮ್ಮ ಆತ್ಮದಲ್ಲಿ ಭರವಸೆಯ ಬೆಳಕು, ಸಮಾಜದಲ್ಲಿ ಸಾಮರಸ್ಯ ಮತ್ತು ರಾಷ್ಟ್ರದಲ್ಲಿ ಪುನರುಜ್ಜೀವನದ ಸಂಕಲ್ಪವಾಗಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಭಗವಾನ್ ಶ್ರೀರಾಮ ಮತ್ತು ತಾಯಿ ಜಾನಕಿಯ ಆಶೀರ್ವಾದದಿಂದ ಮನೆಗಳು ಮಾತ್ರವಲ್ಲದೆ ಹೃದಯಗಳು ಸಹ ಬೆಳಗಲಿ. ಪ್ರತಿಯೊಬ್ಬರ ಜೀವನದಲ್ಲಿ ನಂಬಿಕೆ, ಉತ್ಸಾಹದ ದೀಪ ಬೆಳಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಆದಿತ್ಯನಾಥ ತಿಳಿಸಿದ್ದಾರೆ.
‘ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬ ದೀಪಾವಳಿಯು ಪ್ರತಿಯೊಬ್ಬರ ಬದುಕಿನ ಸಂಕಷ್ಟಗಳನ್ನು ಕಳೆದು, ಪ್ರಗತಿಯ ಬೆಳಕು ಬದುಕಿನಲ್ಲಿ ಪಸರಿಸಲಿ. ದೀಪಗಳ ಹಬ್ಬವು ತಮ್ಮೆಲ್ಲರ ಜೀವನದಲ್ಲಿ ಯಶಸ್ಸು, ಸಮೃದ್ಧಿ, ಐಶ್ವರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.