ADVERTISEMENT

ಗೆಹಲೋತ್‌ ಬಗ್ಗೆ ಮೋದಿ ಮೆಚ್ಚುಗೆ, ಪಕ್ಷ ಲಘುವಾಗಿ ಪರಿಗಣಿಸಬಾರದು: ಪೈಲಟ್‌

ಪಿಟಿಐ
Published 2 ನವೆಂಬರ್ 2022, 13:47 IST
Last Updated 2 ನವೆಂಬರ್ 2022, 13:47 IST
ಸಚಿನ್‌ ಪೈಲಟ್‌ 
ಸಚಿನ್‌ ಪೈಲಟ್‌    

ಜೈಪುರ: ‘ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದಲ್ಲಿ ಮಂಗಳವಾರ ನಡೆದಿದ್ದ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರನ್ನು ಹೊಗಳಿದ್ದಾರೆ. ಇದನ್ನು ಕಾಂಗ್ರೆಸ್‌ ಪಕ್ಷ ಲಘುವಾಗಿ ಪರಿಗಣಿಸಬಾರದು’ ಎಂದು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಬುಧವಾರ ತಿಳಿಸಿದ್ದಾರೆ.

‘ಪ್ರಧಾನಿಯವರು ಮುಖ್ಯಮಂತ್ರಿ ಗೆಹಲೋತ್‌ ಅವರನ್ನು ಪ್ರಶಂಸಿಸಿರುವುದು ಕುತೂಹಲಕರ ಬೆಳವಣಿಗೆಯಾಗಿದೆ. ಏಕೆಂದರೆ ಈ ಹಿಂದೆ ಮೋದಿ ಅವರು ಇದೇ ರೀತಿ ಗುಲಾಂ ನಬಿ ಆಜಾದ್‌ ಅವರನ್ನೂ ಹೊಗಳಿದ್ದರು. ಅನಂತರ ಏನೆಲ್ಲಾ ಬೆಳವಣಿಗೆಗಳು ನಡೆದವು ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಈ ಬೆಳವಣಿಗೆಯನ್ನು ಪಕ್ಷ ಲಘುವಾಗಿ ಪರಿಗಣಿಸಬಾರದು’ ಎಂದು ಕಿವಿಮಾತು ಹೇಳಿದ್ದಾರೆ.

ಮುಖ್ಯಮಂತ್ರಿ ಗೆಹಲೋತ್‌ ಅವರು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಒಲವು ತೋರಿದ್ದರು. ಹೀಗಾಗಿ ಹೊಸ ಮುಖ್ಯಮಂತ್ರಿಯ ಆಯ್ಕೆ ಕುರಿತು ಚರ್ಚಿಸಲು ಸೆಪ್ಟೆಂಬರ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ (ಸಿಎಲ್‌ಪಿ) ಹಮ್ಮಿಕೊಳ್ಳಲಾಗಿತ್ತು. ಗೆಹಲೋತ್‌ ಅವರ ನಿಷ್ಠರು ಈ ಸಭೆಯನ್ನು ಬಹಿಷ್ಕರಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಎಐಸಿಸಿ, ರಾಜಸ್ಥಾನದ ಮೂವರು ಹಿರಿಯ ನಾಯಕರಿಗೆ ನೋಟಿಸ್‌ ನೀಡಿತ್ತು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಪೈಲಟ್‌, ‘ಅಶಿಸ್ತು ತೋರಿದವರ ವಿರುದ್ಧ ಹೈಕಮಾಂಡ್‌ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕಾಂಗ್ರೆಸ್‌ ಶಿಸ್ತಿನ ಪಕ್ಷ. ನಿಯಮ ಹಾಗೂ ಪಕ್ಷದ ಶಿಸ್ತು ಎಲ್ಲರಿಗೂ ಅನ್ವಯವಾಗುತ್ತದೆ. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ. ತಪ್ಪು ಮಾಡಿದವರಿಗೆ ನೋಟಿಸ್‌ ನೀಡಿ, ಅವರಿಂದ ಪ್ರತಿಕ್ರಿಯೆ ಪಡೆದು ಸುಮ್ಮನಾಗಬಾರದು. ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಕೂಡ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಶಿಸ್ತು ತೋರಿರುವ ಮೂವರು ಮುಖಂಡರ ವಿರುದ್ಧ ಪಕ್ಷ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಭರವಸೆ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.