ADVERTISEMENT

ಬಡವರ ಸಾವಿಗೆ ಮೋದಿ ಸದಾ ಮೌನ: ಇಂದೋರ್ ಘಟನೆಗೆ ರಾಹುಲ್‌ ಪ್ರತಿಕ್ರಿಯೆ

ಪಿಟಿಐ
Published 2 ಜನವರಿ 2026, 9:56 IST
Last Updated 2 ಜನವರಿ 2026, 9:56 IST
   

ನವದೆಹಲಿ: ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ 10 ಜನರು ಮೃತಪಟ್ಟಿರುವ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್‌, ‘ಇಂದೋರ್‌ನಲ್ಲಿ ನೀರಲ್ಲ, ವಿಷ ಸರಬರಾಜು ಮಾಡಲಾಗಿದೆ’ ಎಂದು ಕಿಡಿಕಾರಿದ್ದಾರೆ.

‘ಮಧ್ಯಪ್ರದೇಶ ಈಗ ದುರಾಡಳಿತ ಕೇಂದ್ರಬಿಂದುವಾಗಿದೆ. ಕೆಲ ದಿನಗಳ ಹಿಂದೆ ಕೆಮ್ಮಿನ ಸಿರಪ್‌ನಿಂದ ಹಲವರು ಮೃತಪಟ್ಟರು. ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಇಲಿಗಳು ಕಚ್ಚಿ ಶಿಶುಗಳ ಸಾವು ಸಂಭವಿಸಿತು, ಈಗ ಕೊಳಚೆ ನೀರು ಕುಡಿದು ಜನರು ಸಾಯುತ್ತಿದ್ದಾರೆ. ಬಡವರ ಸಾವಿಗೆ ಪ್ರಧಾನಿ ಮೋದಿ ಸದಾ ಮೌನ ವಹಿಸುತ್ತಾರೆ’ ಎಂದು ಕುಟುಕಿದ್ದಾರೆ.

ADVERTISEMENT

‘ಇಂದೋರ್‌ನ ಮನೆ ಮನೆಗಳಲ್ಲಿ ಶೋಕ ಹರಡಿದೆ. ಬಡವರು ಅಸಹಾಯಕರಾಗಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಬಿಜೆಪಿ ನಾಯಕರಿಂದ ದುರಹಂಕಾರದ ಹೇಳಿಕೆಗಳು ಬಂದಿವೆ. ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಗಳಿಗೆ ಸಾಂತ್ವನ ಬೇಕಿದೆ. ಆದರೆ ಅಲ್ಲಿನ ಸರ್ಕಾರ ಅಹಂಕಾರ ಪ್ರದರ್ಶಿಸುತ್ತಿದೆ’ ಎಂದು ಹೇಳಿದ್ದಾರೆ.

‘ಕೊಳಕಾದ, ದುರ್ವಾಸನೆಯುಕ್ತ ನೀರಿನ ಬಗ್ಗೆ ಜನರು ಪದೇ ಪದೇ ದೂರು ನೀಡುತ್ತಿದ್ದರು ಅದನ್ನು ನಿರ್ಲಕ್ಷ್ಯಿಸಿರುವುದೇಕೆ? ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಬೆರೆಯಲು ಹೇಗೆ ಸಾಧ್ಯ? ಸಕಾಲದಲ್ಲಿ ಸರಬರಾಜನ್ನು ನಿಲ್ಲಿಸಿಲ್ಲ ಏಕೆ? ಸಂಬಂಧಪಟ್ಟ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಲಾಗುತ್ತದೆ?’ ಎಂದು ಪ್ರಶ್ನಿಸಿದ್ದಾರೆ.

‘ಶುದ್ಧ ನೀರು ಕೊಡುವುದು ಬಿಟ್ಟಿ ಭಾಗ್ಯವಲ್ಲ. ಅದು ಜನರ ಬೇಡಿಕೆ ಮತ್ತು ಹಕ್ಕಾಗಿದೆ. ಈ ಹಕ್ಕಿನ ನಿರಾಕರಣೆಗೆ ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರ, ಅದರ ನಿರ್ಲಕ್ಷ್ಯ ಆಡಳಿತ ಮತ್ತು ನಿರ್ದಯ ನಾಯಕರು ಸಂಪೂರ್ಣವಾಗಿ ಕಾರಣರಾಗಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.