ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ, ಸಂಸದ ಅಭಿಷೇಕ್ ಬ್ಯಾನರ್ಜಿ
ಪಿಟಿಐ ಚಿತ್ರ
ಕೋಲ್ಕತ್ತ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ, ಸಂಸದ ಅಭಿಷೇಕ್ ಬ್ಯಾನರ್ಜಿ ಟೀಕಿಸಿದ್ದಾರೆ. ಪಾಕಿಸ್ತಾನಕ್ಕೆ ಪಾಠ ಕಲಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ದಾಳಿ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಭಿಷೇಕ್, 'ಇನ್ನಷ್ಟು ನಿರ್ದಿಷ್ಟ ದಾಳಿಗಳನ್ನು ನಡೆಸುವ ಅಥವಾ ಸಾಂಕೇತಿಕವಾಗಿ ಬೆದರಿಕೆಗಳನ್ನು ಒಡ್ಡುವ ಸಮಯ ಇದಲ್ಲ. ಅವರಿಗೆ ಅರ್ಥವಾಗುವ ಭಾಷೆಯಲ್ಲೇ ಪಾಠ ಕಲಿಸುವ ಸಮಯವಿದು. ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಕಾಲ ಬಂದಿದೆ' ಎಂದು ಪ್ರತಿಪಾದಿಸಿದ್ದಾರೆ.
'ಕ್ಷುಲ್ಲಕ ರಾಜಕೀಯವನ್ನು ಮೀರಿ ನಿಲ್ಲಬೇಕಿದೆ'
ಮುಖ್ಯವಾಹಿನಿಯ ಸುದ್ದಿ ಮಾಧ್ಯಮಗಳು ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವವರ ನಡವಳಿಕೆಗಳನ್ನು ಕೆಲವು ದಿನಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಗೆ ಕಾರಣವಾದ ವೈಫಲ್ಯಗಳ ಬಗ್ಗೆ ಸಮಗ್ರ ತನಿಖೆ ನಡೆಸುವ ಬದಲು, ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಅನುಕೂಲ ಮಾಡಿಕೊಡುವಂತಹ ನಿರೂಪಣೆಯನ್ನು ಜನರ ಮುಂದಿಡುವುದಕ್ಕೆ ಒತ್ತು ನೀಡಲಾಗುತ್ತಿದೆ. ಅಂತಹ ಕ್ಷುಲ್ಲಕ ರಾಜಕೀಯವನ್ನು ಮೀರಿ, ಈ ಸಮಸ್ಯೆಯನ್ನು ನಿರ್ಣಾಯಕ ರೀತಿಯಲ್ಲಿ ಪರಿಹರಿಸಬೇಕಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಮಂಗಳವಾರ (ಏಪ್ರಿಲ್ 22ರಂದು) ನಡೆದ ದಾಳಿ ವೇಳೆ, ಇಬ್ಬರು ವಿದೇಶಿಯರು ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 26 ಪ್ರವಾಸಿಗರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ಲಲ್ಲೇ, ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನತೆ ತೀವ್ರಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.