ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರಿಗೆ ಅಧಿಕಾರ ದೊರೆತ ದಿನವೇ ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಲಿದೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ತಿವಾರಿ, 'ರಾಹುಲ್ ಗಾಂಧಿ ಅವರ ಕೈಗೆ ಅಧಿಕಾರ ಹಾಗೂ ಭಾರತಕ್ಕಾಗಿ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕು ದೊರೆಯುವ ದಿನವೇ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಲಿದೆ. ಅವರು ದೃಢ ನಿಶ್ಚಯ ಹೊಂದಿರುವ ವ್ಯಕ್ತಿಯಾಗಿರುವುದರಿಂದ ನನ್ನಲ್ಲಿ ಆ ನಂಬಿಕೆ ಇದೆ' ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್ 22ರಂದು ನಡೆಸಿದ ಗುಂಡಿನ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿದೆ.
ಉಗ್ರರ ದಾಳಿಗೆ ಪ್ರತಿಯಾಗಿ, ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ನೆಲೆಗಳ ಮೇಲೆ ಮೇ 7ರಂದು 'ಆಪರೇಷನ್ ಸಿಂಧೂರ' ನಡೆಸಿತ್ತು.
ಹೀಗಾಗಿ, ಸಂಘರ್ಷ ತೀವ್ರಗೊಂಡಿತ್ತು. ಆದರೆ, ಉಭಯ ದೇಶಗಳು ಸದ್ಯ ಕದನ ವಿರಾಮ ಒಪ್ಪಂದ ಮಾಡಿಕೊಂಡಿರುವುದರಿಂದ ಪರಿಸ್ಥಿತಿ ಹತೋಟಿಯಲ್ಲಿದೆಯಾದರೂ, 'ಪಾಕ್‌ಗೆ ತಕ್ಕ ಪಾಠ ಕಲಿಸಬೇಕು. ಪಿಒಕೆ ಅನ್ನು ಹಿಂಪಡೆಯಬೇಕು' ಎಂಬ ಕೂಗು ದೇಶದಾದ್ಯಂತ ಜೋರಾಗಿದೆ. ಇದೇ ವಿಚಾರವಾಗಿ, ರಾಜಕೀಯ ಪಕ್ಷಗಳು ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿವೆ.
ಪ್ರಸಿದ್ಧ ಹಿಂದೂ ದಾರ್ಶನಿಕ ಮತ್ತು ಪದ್ಮವಿಭೂಷಣ ಪುರಸ್ಕೃತ ರಾಮಭದ್ರಾಚಾರ್ಯ ಸ್ವಾಮೀಜಿ ಅವರು, ಇತ್ತೀಚೆಗೆ ತಮ್ಮನ್ನು ಭೇಟಿಯಾದ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಗೆ ದೀಕ್ಷೆ ನೀಡಿ 'ಗುರುದಕ್ಷಿಣೆ' ರೂಪದಲ್ಲಿ ಪಿಒಕೆ ಅನ್ನು ನೀಡುವಂತೆ ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.