ನವದೆಹಲಿ: 'ನಾಯಕ ಹೇಳಿದರೆ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್‌ಗೆ ಇಳಿಯುತ್ತೇನೆ' – ಹೀಗೆ ಹೇಳಿದ್ದು ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿರುವ ಕನ್ಹಯ್ಯ, ರಾಜಕೀಯವನ್ನು ಕ್ರಿಕೆಟ್‌ಗೆ ಹೋಲಿಸಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ನಿರ್ವಹಿಸಬೇಕಿರುವ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಜವಾಬ್ದಾರಿಯಂತೆಯೇ, ರಾಜಕೀಯ ರಂಗದಲ್ಲಿಯೂ ಹಲವು ಹೊಣೆಗಳನ್ನು ನಿರ್ವಹಿಸಬೇಕಿದೆ ಎಂದಿದ್ದಾರೆ.
ಬಿಹಾರದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವಿರಾ ಎಂಬ ಪ್ರಶ್ನೆಗೆ ಅವರು, 'ಚುನಾವಣೆಯಲ್ಲಿ ಸ್ಪರ್ಧಿಸುವುದು, ಇತರರು ಸ್ಪರ್ಧಿಸುವಂತೆ ಮಾಡುವುದು, ಪ್ರಚಾರ ಎಲ್ಲವೂ ಪಕ್ಷ ವಹಿಸುವ ಜವಾಬ್ದಾರಿಗಳಾಗಿವೆ. ಪಕ್ಷ ಹೇಳಿದರೆ, ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಈ ಹಿಂದೆ ನಾನು ಚುನಾವಣೆಗಳಲ್ಲಿ ಸ್ಪರ್ಧಿಸಿದಾಗಲೂ ಅದು ಪಕ್ಷದ ಆದೇಶದ ಅನುಸಾರವಾಗಿಯೇ ಆಗಿತ್ತು' ಎಂದು ಹೇಳಿದ್ದಾರೆ.
'ತಂಡದಿಂದ ಹೊರಗುಳಿಬೇಕು ಮತ್ತು ಮೈದಾನದಲ್ಲಿರುವವಿಗೆ ಪಾನೀಯ ನೀಡಬೇಕು ಎಂದು ನಾಯಕ ಸೂಚಿಸಿದರೆ, ನಾನದನ್ನು ಮಾಡುತ್ತೇನೆ. ಅವರು ಹೇಳಿದರೆ, ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ ಮಾಡುತ್ತೇನೆ' ಎಂದಿದ್ದಾರೆ. ಆ ಮೂಲಕ, ತಾವು ಸ್ಪರ್ಧಿಸಬೇಕೇ, ಬೇಡವೇ ಎಂಬುದು ಪಕ್ಷದ ನಿರ್ಧಾರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮನ್ನು (ಕನ್ಹಯ್ಯ ಕುಮಾರ್ ಅವರನ್ನು) ಬಿಹಾರ ಚುನಾವಣೆ ವೇಳೆ ಪ್ರಮುಖ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಬಿಂಬಿಸುತ್ತಿದೆ ಎಂದು ಕೇಳಿದ್ದಕ್ಕೆ, 'ಪಕ್ಷವು ಲಕ್ಷಾಂತರ ಕಾರ್ಯಕರ್ತರಿಗೆ ವಹಿಸಿರುವಂತೆ ನನಗೂ ಜವಾಬ್ದಾರಿ ನೀಡಿದೆ. ಚುನಾವಣೆಯು ತಂಡದಲ್ಲಿರುವ ವಿಭಿನ್ನ ವ್ಯಕ್ತಿಗಳು ಪ್ರತ್ಯೇಕ ಹೊಣೆ ನಿರ್ವಹಿಸುವ ಆಟವಿದ್ದಂತೆ' ಎಂಬ ಜಾಣ್ಮೆಯ ಉತ್ತರ ನೀಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, 'ಈ ಹಿಂದೆ ಎಂ.ಎಸ್. ಧೋನಿ ವಿಕೆಟ್‌ಕೀಪರ್ ಆಗಿದ್ದರು. ಈಗ ರಿಷಭ್ ಪಂತ್ ಇದ್ದಾರೆ' ಎನ್ನುವ ಮೂಲಕ ಎಲ್ಲ ಸಾಧ್ಯತೆಗಳೂ ಇವೆ ಎಂಬ ಸುಳಿವನ್ನು ಕ್ರಿಕೆಟ್ ಭಾಷೆಯಲ್ಲಿಯೇ ನೀಡಿದ್ದಾರೆ.
'ಪಕ್ಷವು ಸಾಮೂಹಿಕ ಪ್ರಯತ್ನಗಳೊಂದಿಗೆ ಕಾರ್ಯನಿರ್ವಹಿಸುತ್ತದೆ' ಎಂದು ಪ್ರತಿಪಾದಿಸಿರುವ ಕನ್ಹಯ್ಯ, 'ಚುನಾವಣೆಗಳಲ್ಲಿ ಸ್ಪರ್ಧಿಸುವ ನಿರ್ಧಾರವೂ ಸಾಮೂಹಿಕವಾಗಿಯೇ ಇರಬೇಕು' ಎಂದು ಒತ್ತಿಹೇಳಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಇದೇ ವರ್ಷ ಅಕ್ಟೋಬರ್–ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ.
ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ, ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಸೋಲು ಕಂಡಿದ್ದಾರೆ. 2019ರಲ್ಲಿ (ಮೊದಲ ಬಾರಿ) ಬಿಹಾರದ ಬೆಗುಸರಾಯ್ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಹಾಗಿ ಸ್ಪರ್ಧಿಸಿದ್ದ ಅವರು, 2024ರಲ್ಲಿ ಕಾಂಗ್ರೆಸ್ ಹುರಿಯಾಳಾಗಿ ಈಶಾನ್ಯ ದೆಹಲಿಯಿಂದ ಚುನಾವಣೆ ಎದುರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.