ಉತ್ತರಾಖಂಡದ ಅಂಧ ವ್ಯಕ್ತಿಗಳ ಸಬಲೀಕರಣದ ರಾಷ್ಟ್ರೀಯ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾವುಕರಾದ ದ್ರೌಪದಿ ಮುರ್ಮು
ಎಕ್ಸ್ ಚಿತ್ರ
ಡೆಹಾರಡೂನ್: ಉತ್ತರಾಖಂಡಕ್ಕೆ ಮೂರು ದಿನಗಳ ಭೇಟಿ ನೀಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ 67ನೇ ಜನ್ಮದಿನ ಅತ್ಯಂತ ಸ್ಮರಣೀಯವಾಗಿತ್ತು. ಅಂಧ ಮಕ್ಕಳು ಹಾಡಿನ ಮೂಲಕ ಜನ್ಮದಿನ ಶುಭಾಶಯ ಕೋರುತ್ತಿದ್ದಂತೆ, ಉಕ್ಕಿಬರುತ್ತಿದ್ದ ಕಣ್ಣೀರನ್ನು ತಡೆಯಲಾಗದೆ ರಾಷ್ಟ್ರಪತಿ ಅವರು ಬಿಕ್ಕಿ ಬಿಕ್ಕಿ ಅತ್ತರು.
ಅಂಧ ವ್ಯಕ್ತಿಗಳ ಸಬಲೀಕರಣದ ರಾಷ್ಟ್ರೀಯ ಸಂಸ್ಥೆಗೆ ರಾಷ್ಟ್ರಪತಿ ಮುರ್ಮು ಅವರು ಶುಕ್ರವಾರ ಭೇಟಿ ನೀಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಅಲ್ಲಿನ ವಿದ್ಯಾರ್ಥಿಗಳು ‘ಹ್ಯಾಪಿ ಬರ್ತ್ ಡೇ ಟು ಯೂ’ ಎಂಬ ಹಾಡನ್ನು ಹಾಡಿದರು. ಮಕ್ಕಳ ಹಾಡು ಕೇಳಿ ಭಾವುಕರಾದ ಅವರು, ಗಳಗಳನೆ ಅತ್ತರು.
‘ಮಕ್ಕಳು ಎಷ್ಟು ಸುಂದರವಾಗಿ ಹಾಡಿದರೆಂದರೆ ನನ್ನಗೆ ಕಣ್ಣೀರು ತಡೆಯಲೇ ಆಗಲಿಲ್ಲ. ಹೃದಯಾಳದ ಆ ಹಾಡು ಕೇಳಿ ಭಾವುಕಳಾದೆ’ ಎಂದು ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.
‘ಅಂಗವೈಕಲ್ಯತೆಯೊಂದಿಗೆ ಹುಟ್ಟಿದ ಮಕ್ಕಳಿಗೆ ವಿಶೇಷವಾದ ಶಕ್ತಿಯೊಂದು ಇದ್ದೇ ಇರುತ್ತದೆ. ಹೀಗಾಗಿ ಆತ್ಮವಿಶ್ವಾಸದಿಂದ ಮುಂದಡಿ ಇಟ್ಟಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ. ಈ ನಿಟ್ಟಿನಲ್ಲಿ ಅಂಗವಿಕಲರಿಗೂ ಸಮಾನ ಅವಕಾಶ ಸಿಗಬೇಕು ಎಂಬ ಕಾರಣದಿಂದ ಸರ್ಕಾರವು ಹಲವು ನೀತಿಗಳನ್ನು ರೂಪಿಸಿದೆ’ ಎಂದರು.
‘ದಯೆ, ಕರುಣೆ ಹಾಗೂ ಎಲ್ಲರನ್ನೂ ಒಳಗೊಳ್ಳುವ ಗುಣ ಭಾರತದ ಇತಿಹಾಸದಲ್ಲಿ ಹಾಸುಹೊಕ್ಕಾಗಿದೆ. ಈ ಮಕ್ಕಳು ಶಿಕ್ಷಣ ಪಡೆಯುವ ಮೂಲಕ ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದರು.
ಉತ್ತರಾಖಂಡದ ರಾಜ್ಯಪಾಲ, ನಿವೃತ್ತ ಲೆಫ್ಟಿನೆಂಟ್ ಗುರ್ಮಿತ್ ಸಿಂಗ್ ಮಾತನಾಡಿ, ‘ದೇಶವು ಈಗ ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 2047ರಲ್ಲಿ ಸದೃಢ ಭಾರತ ನಿರ್ಮಾಣದ ಕನಸಿನ ಗುರಿ ಸಾಧನೆಯೆಡೆಗೆ ದೇಶ ಮುನ್ನಡೆಯುತ್ತಿದೆ. ಈ ಪಯಣದಲ್ಲಿ ನೀವೂ ಭಾಗಿ’ ಎಂದರು.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಷ್ಟ್ರಪತಿ ಮುರ್ಮು ಅವರಿಗೆ ಜನ್ಮದಿನದ ಶುಭಾಶಯ ಕೋರಿದರು. ‘ಸಂಕಷ್ಟ ದಿನಗಳನ್ನು ನೋಡಿರುವ ದ್ರೌಪದಿ ಮುರ್ಮು ಅವರ ಬದುಕು ಮತ್ತು ಸಾಧನೆಯೇ ನಮ್ಮೆಲ್ಲರಿಗೂ ಸ್ಫೂರ್ತಿ. ಸೌಲಭ್ಯ ವಂಚಿತ ಸಮುದಾಯಗಳ ಸಬಲೀಕರಣದತ್ತ ಅವರ ಪರಿಶ್ರಮ ಅನುಕರಣೀಯ’ ಎಂದರು.
ಉತ್ತರಾಖಂಡಕ್ಕೆ ಗುರುವಾರ ಬಂದ ದ್ರೌಪದಿ ಮುರ್ಮು ಅವರು ಇಲ್ಲಿನ ನವೀಕೃತ ‘ಪ್ರೆಸಿಡೆಂಟ್ ರಿಟ್ರೀಟ್’ ಅನ್ನು ಉದ್ಘಾಟಿಸಿ ‘ರಾಷ್ಟ್ರಪತಿ ನಿಕೇತನ’ ಎಂದು ಮರುನಾಮಕರಣ ಮಾಡಿದರು. ಇದರೊಂದಿಗೆ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಜೂನ್ 21ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಗಾಗಿ ದೆಹಲಿಗೆ ಪ್ರಯಾಣಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.