
ದ್ರೌಪದಿ ಮುರ್ಮು
ನವದೆಹಲಿ: ‘ನರೇಗಾ’ ಯೋಜನೆಗೆ ಪರ್ಯಾಯವಾಗಿ ರೂಪಿಸಿರುವ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.
‘ಇದೀಗ ಮಸೂದೆ ಕಾಯ್ದೆ ಆಗಿದೆ. ಈ ಕಾಯ್ದೆಯು ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷಕ್ಕೆ 125 ದಿನಗಳ ಶಾಸನಬದ್ಧ ವೇತನದ ಉದ್ಯೋಗ ಖಾತರಿಯನ್ನು ನೀಡುತ್ತದೆ. ಜತೆಗೆ, ಸಬಲೀಕರಣ, ಸಮಗ್ರ ಬೆಳವಣಿಗೆ, ಅಭಿವೃದ್ಧಿ ಉಪಕ್ರಮಗಳ ಜಾರಿಗೊಳಿಸಲಾಗುತ್ತದೆ. ಇದರಿಂದಾಗಿ ಸಮೃದ್ಧ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತಕ್ಕೆ ಭದ್ರ ಅಡಿಪಾಯವಾಗುತ್ತದೆ. ಇದು ಗ್ರಾಮೀಣ ಉದ್ಯೋಗ ನೀತಿಯ ರೂಪಾಂತರದಲ್ಲಿ ಮಹತ್ವದ ಮೈಲಿಗಲ್ಲು’ ಎಂದು ರಾಷ್ಟ್ರಪತಿ ಅವರ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ವಿಬಿ–ಜಿ ರಾಮ್ ಜಿ ಮಸೂದೆಯನ್ನು ವಿರೋಧ ಪಕ್ಷಗಳ ತೀವ್ರ ಪ್ರತಿರೋಧದ ನಡುವೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗುರುವಾರ ಅಂಗೀಕರಿಸಲಾಗಿತ್ತು.
ಲೋಕಸಭೆಯಲ್ಲಿ ಮಸೂದೆ ಬಗ್ಗೆ ಎಂಟು ಗಂಟೆ ನಡೆದ ವಿಸ್ತೃತ ಚರ್ಚೆಗೆ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಉತ್ತರಿಸಿ, ‘ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಎತ್ತಿಹಿಡಿಯುತ್ತದೆ’ ಎಂದು ಪ್ರತಿಪಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.