ADVERTISEMENT

ಯುದ್ಧ ನಿಲ್ಲಿಸುವಂತೆ ಪುಟಿನ್‌ ಮೇಲೆ ಭಾರತ ಒತ್ತಡ ಹೇರಬೇಕು: ಆರ್‌ಎಸ್‌ಎಸ್‌ ನಾಯಕ

ಪಿಟಿಐ
Published 25 ಫೆಬ್ರುವರಿ 2022, 10:13 IST
Last Updated 25 ಫೆಬ್ರುವರಿ 2022, 10:13 IST
ರಷ್ಯಾ ಮಿಲಿಟರಿ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಜನವಸತಿ ಪ್ರದೇಶ ಹಾನಿಗೀಡಾಗಿರುವುದು  (ಎಎಫ್‌ಪಿ ಚಿತ್ರ)
ರಷ್ಯಾ ಮಿಲಿಟರಿ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಜನವಸತಿ ಪ್ರದೇಶ ಹಾನಿಗೀಡಾಗಿರುವುದು (ಎಎಫ್‌ಪಿ ಚಿತ್ರ)   

ನವದೆಹಲಿ: ಉಕ್ರೇನ್ ವಿರುದ್ಧದ ಮಿಲಿಟರಿ ದಾಳಿಯನ್ನು ತಕ್ಷಣ ನಿಲ್ಲಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ಭಾರತ ಒತ್ತಡ ಹೇರಬೇಕು. ಇದಕ್ಕಾಗಿ ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ರಾಷ್ಟ್ರೀಯ ಕಾರ್ಯನಿರ್ವಾಹಕ ಇಂದ್ರೇಶ್‌ ಕುಮಾರ್‌ ಅವರು ಶುಕ್ರವಾರ ಆಗ್ರಹಿಸಿದ್ದಾರೆ.

‘ಯುದ್ಧವು ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಆದರೆ ಮನುಕುಲಕ್ಕೆ ಹಾನಿ ಮಾಡುತ್ತದೆ‘ ಎಂದು ಹೇಳಿರುವ ಇಂದ್ರೇಶ್‌, ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಜಾಗತಿಕ ನಾಯಕರು, ರಾಜತಾಂತ್ರಿಕರು ಮತ್ತು ನಾಗರಿಕ ಸಮಾಜವು ಪುಟಿನ್ ಮನವೊಲಿಸಬೇಕು ಎಂದು ಅಭಿಪ್ರಾಯಪಟ್ಟರು.

‘ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ಸರ್ಕಾರಗಳು, ರಾಜಕಾರಣಿಗಳು, ರಾಜತಾಂತ್ರಿಕರು, ರಕ್ಷಣಾ ತಜ್ಞರು, ವಿಜ್ಞಾನಿಗಳು ಮತ್ತು ನಾಗರಿಕ ಸಮಾಜವು ಒಗ್ಗೂಡಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ಒತ್ತಡ ಹೇರಬೇಕು. ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಮಾತುಕತೆಯ ಹಾದಿಯನ್ನು ಅನುಸರಿಸಬೇಕು’ ಎಂದು ಇಂದ್ರೇಶ್‌ ಆಗ್ರಹಿಸಿದ್ದಾರೆ.

ADVERTISEMENT

‘ಭಾರತ ಶಾಂತಿಯನ್ನು ಬಯಸುತ್ತದೆ. ಯುದ್ಧವನ್ನು ಪ್ರೋತ್ಸಾಹಿಸುವ ಪರಿಸ್ಥಿತಿ ಇರಬಾರದು. ಯುದ್ಧದ ಭೀಕರತೆಯು ಅತ್ಯಂತ ಭಯಾನಕ, ಅಸಹನೀಯ. ಅದು ಅತ್ಯಂತ ನೋವಿನಿಂದ ಕೂಡಿರುತ್ತದೆ’ ಎಂದು ಅವರು ತಿಳಿಸಿದರು.

ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಗಳಾದ ‘ರಾಷ್ಟ್ರೀಯ ಮುಸ್ಲಿಂ ಮಂಚ್’ ಮತ್ತು ‘ರಾಷ್ಟ್ರೀಯ ಕ್ರಿಶ್ಚಿಯನ್ ಮಂಚ್‌’ನ ಸಂಸ್ಥಾಪಕ ಮತ್ತು ಮುಖ್ಯ ಪೋಷಕರಾಗಿರುವ ಇಂದ್ರೇಶ್‌ ಕುಮಾರ್‌, ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಹಾದಿಯಲ್ಲಿ ಸಾಗಲು ರಷ್ಯಾಕ್ಕೆ ಸಲಹೆ ನೀಡುವಂತೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ನಾಯಕರಿಗೂ ಮನವಿ ಮಾಡಿದರು.

‘ಯುದ್ಧವು ಯಾವುದೇ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಯುದ್ಧದದಲ್ಲಿ ಹೆಚ್ಚಿನ ಸಂಖ್ಯೆಯ ಅಮಾಯಕ ಜೀವಗಳು ಬಲಿಯಾಗುತ್ತವೆ. ಲಕ್ಷಗಟ್ಟಲೆ ಜನರು ನಿರಾಶ್ರಿತರಾಗುತ್ತಾರೆ. ಸಾವಿರಾರು ಕೋಟಿ ಹಣ ವ್ಯರ್ಥವಾಗುತ್ತದೆ‘ ಎಂದು ಅವರು ಹೇಳಿದರು.

ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ದಾಳಿ ಪ್ರಾರಂಭಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪುಟಿನ್ ಅವರೊಂದಿಗೆ ಮಾತನಾಡಿದ್ದಾರೆ. ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆಯೂ ಅವರು ಕರೆ ನೀಡಿದ್ದಾರೆ. ಜತೆಗೆ, ಉಕ್ರೇನ್‌ನಿಂದ ತನ್ನ ನಾಗರಿಕರ ಸುರಕ್ಷಿತ ನಿರ್ಗಮನ ಮತ್ತು ವಾಪಸಾತಿಗೆ ಭಾರತವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಮೋದಿ ಒತ್ತಿ ಹೇಳಿದ್ದಾರೆ.

ರಷ್ಯಾ ಮತ್ತು ನ್ಯಾಟೊ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ, ನೇರ ಮಾತುಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ಮೋದಿ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.