ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ
ಪಿಟಿಐ ಚಿತ್ರ
ನವದೆಹಲಿ: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಬಲವಾಗಿ ಖಂಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಜಗತ್ತಿಗೆ ಬೇಕಿರುವುದು ಶಾಂತಿ, ಅನಗತ್ಯ ಯುದ್ಧಗಳಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಜಗತ್ತಿನ ಪ್ರಜಾಪ್ರಭುತ್ವ ನಾಯಕರು ಎಂದು ಕರೆಯಲ್ಪಡುವವರು ಸಾರ್ವಭೌಮ ರಾಷ್ಟ್ರದ ನಾಯಕತ್ವವನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ್ದು, ಹಲವಾರು ಮುಗ್ಧ ಜನರನ್ನು ಕೊಂದಿರುವುದು ಹೇಯ ಕೃತ್ಯವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ದಾಳಿಯ ಉಸ್ತುವಾರಿ ವಹಿಸಿಕೊಂಡವರು, 'ಕಣ್ಣಿಗೆ ಕಣ್ಣು ಎಂದರೆ ಇಡೀ ಜಗತ್ತ ಕುರುಡಾಗುತ್ತದೆ' ಎಂಬ ಮಹಾತ್ಮ ಗಾಂಧಿಯವರ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.
ಕಾರಣ ಏನೇ ಆಗಿರಲಿ ಸಂಘರ್ಷದಲ್ಲಿ ಮುಗ್ಧ ಜನರನ್ನು ಹತ್ಯೆ ಮಾಡಿರುವುದು ಹೇಯ ಕೃತ್ಯ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಮುಂದೆ ತಲೆಬಾಗಿರುವ ನಮ್ಮ ಪ್ರಧಾನಿ, ಸಂಘರ್ಷ ಪೀಡಿತ ದೇಶಗಳಲ್ಲಿರುವ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ಭಾವಿಸಿರುವುದಾಗಿ ಪ್ರಿಯಾಂಕಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.