ADVERTISEMENT

ಲೋಕಸಭೆಯಲ್ಲಿ ಮತ್ತೆ ಪ್ರತಿಭಟನೆ

ಮೇಕೆದಾಟು ಯೋಜನೆ: ಸಂಸದರೊಂದಿಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಸಭೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 19:45 IST
Last Updated 20 ಡಿಸೆಂಬರ್ 2018, 19:45 IST
ಮೇಕೆದಾಟು ಯೋಜನೆಗೆ ವಿರೋಧಿಸಿ ಎಐಎಡಿಎಂಕೆ ಸಂಸದರು ಗುರುವಾರ ನವದೆಹಲಿಯಲ್ಲಿ ಸಂಸತ್ ಮುಂಭಾಗ ಪ್ರತಿಭಟನೆ ನಡೆಸಿದರು– ಪಿಟಿಐ ಚಿತ್ರ
ಮೇಕೆದಾಟು ಯೋಜನೆಗೆ ವಿರೋಧಿಸಿ ಎಐಎಡಿಎಂಕೆ ಸಂಸದರು ಗುರುವಾರ ನವದೆಹಲಿಯಲ್ಲಿ ಸಂಸತ್ ಮುಂಭಾಗ ಪ್ರತಿಭಟನೆ ನಡೆಸಿದರು– ಪಿಟಿಐ ಚಿತ್ರ   

ನವದೆಹಲಿ: ಮೇಕೆದಾಟು ಯೋಜನೆಯ ಪರವಾಗಿ ಕರ್ನಾಟಕದ ಸಂಸದರು ಲೋಕಸಭೆಯಲ್ಲಿ ಗುರುವಾರ ಗಟ್ಟಿ ಧ್ವನಿಯೊಂದಿಗೆ ಪ್ರತಿಭಟನೆ ನಡೆಸಿದರೆ, ಯಾವುದೇ ಕಾರಣಕ್ಕೂ ಯೋಜನೆಗೆ ಅನುಮತಿ ನೀಡಕೂಡದು ಎಂದು ಆಗ್ರಹಿಸಿ ತಮಿಳುನಾಡಿನ ಸಂಸದರು ಪ್ರತಿಭಟನೆ ಮುಂದುವರಿಸಿದರು.

ಪ್ರತಿಭಟನೆಯಿಂದಾಗಿಯೇ ಕಲಾಪ ಎರಡು ಬಾರಿ ಮುಂದಕ್ಕೆ ಹೋಯಿತು. ಎರಡೂ ರಾಜ್ಯಗಳ ಸಂಸದರ ನಡುವಿನ ಜಟಾಪಟಿ ಸದನದ ಗಮನ ಸೆಳೆಯಿತು.

ಬೆಳಿಗ್ಗೆ 11ಕ್ಕೆ ಹಾಗೂ ಮಧ್ಯಾಹ್ನ 12ಕ್ಕೆ ಕಲಾಪ ಆರಂಭ ಆಗುತ್ತಿದ್ದಂತೆಯೇ ಎಐಎಡಿಎಂಕೆ ಸದಸ್ಯರು ಘೋಷಣೆ ಕೂಗುತ್ತಲೇ ಸ್ಪೀಕರ್‌ ಎದುರಿನ ಜಾಗಕ್ಕೆ ನುಗ್ಗಿ ಪ್ರತಿಭಟನೆ ಆರಂಭಿಸಿದರು. ರಾಜ್ಯದ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರೂ ಅವರನ್ನು ಅನುಕರಿಸಿದರು.

ADVERTISEMENT

ನೀರಾವರಿ ಉದ್ದೇಶದಿಂದ ಕರ್ನಾಟಕ ಮೇಕೆದಾಟು ಬಳಿ ಜಲಾಶಯ ನಿರ್ಮಿಸುತ್ತಿದ್ದು, ತಮಿಳುನಾಡಿನ ರೈತರಿಗೆ ತೀವ್ರ ಅನ್ಯಾಯವಾಗಲಿದೆ. ಆದರೂ ಕೇಂದ್ರ ಸರ್ಕಾರ ಅನುಮತಿ ನೀಡುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ತಮಿಳುನಾಡಿನ ಸಂಸದರು ಆರೋಪಿಸಿದರು.

ಕುಡಿಯುವ ನೀರಿನ ಪೂರೈಕೆಯೇ ಮೇಕೆದಾಟು ಯೋಜನೆಯ ಉದ್ದೇಶ. ನೀರಾವರಿಗಾಗಿ ಯೋಜನೆ ಮೂಲಕ ಒಂದು ಹನಿ ನೀರನ್ನೂ ಬಳಸುವುದಿಲ್ಲ ಎಂದು ಬಿಜೆಪಿ ಸದಸ್ಯ ಪ್ರಹ್ಲಾದ್‌ ಜೋಶಿ ಹೇಳಿದರು.

ಯೋಜನೆ ಕುರಿತು ವಿಸ್ತೃತ ವರದಿಯನ್ನು ಕೇಂದ್ರ ಸರ್ಕಾರ ಕೋರಿದ್ದು, ಇನ್ನಷ್ಟೇ ಅನುಮತಿ ನೀಡಬೇಕಿದೆ. ಆದರೆ, ಕರ್ನಾಟಕ ಮತ್ತು ತಮಿಳುನಾಡಿನ ಜನರ ಅನುಕೂಲದ ದೃಷ್ಟಿಯಿಂದ ಕೇಂದ್ರವು ಅನುಮತಿ ನೀಡಬೇಕು ಎಂದು ಅವರು ಕೋರಿದರು. ಮತ್ತೆ ಗದ್ದಲ ಆರಂಭವಾಗಿದ್ದರಿಂದ ಕಲಾಪವನ್ನು ಪುನಃ ಮುಂದೂಡಲಾಯಿತು.

ಕಾವೇರಿ ನೀರಿಗಾಗಿ ಬಿಜೆಪಿಯು ಕರ್ನಾಟಕದಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಐಎಡಿಎಂಕೆ ಸದಸ್ಯ ಏಳುಮಲೈ ಕಲಾಪವನ್ನು ಮುಂದೂಡಿದ ಬಳಿಕ ಕೂಗಿ ಹೇಳಿದರು.

ಸಂಸದರ ಸಭೆ: ಮೇಕೆದಾಟು ಯೋಜನೆ ಕುರಿತು ಸಂಸತ್‌ನಲ್ಲಿ ಹೋರಾಟ ರೂಪಿಸುವ ನಿಟ್ಟಿನಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಸಚಿವ ಡಿ.ವಿ.ಸದಾನಂದಗೌಡ ಅವರ ನಿವಾಸದಲ್ಲಿ ಬೆಳಿಗ್ಗೆ ರಾಜ್ಯದ ಸಂಸದರ ಸಭೆ ನಡೆಸಿ ಚರ್ಚಿಸಿದರು.

ಮೇಕೆದಾಟು ಯೋಜನೆಯ ರೂಪುರೇಷೆ ಕುರಿತು ಮಾಹಿತಿ ನೀಡಿದ ಸಚಿವ ಶಿವಕುಮಾರ್, ಯೋಜನೆಗೆ ಅತ್ಯಂತ ಕಡಿಮೆ ವೆಚ್ಚವಾಗಲಿದ್ದು, ಕಡಿಮೆ ಜನವಸತಿ ಪ್ರದೇಶ ಮುಳಗಡೆಯಾಗಲಿದೆ. ಬೆಂಗಳೂರಿಗೆ ಕುಡಿಯುವ ನೀರು ದೊರೆಯಲಿದ್ದು, ರಾಜ್ಯಕ್ಕೆ ವಿದ್ಯುತ್ ಲಭ್ಯವಾಗಲಿದೆ ಎಂದು ಹೇಳಿದರು.

ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ಈ ಆಧಾರದ ಮೇಲೆ ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡಲಿದೆ. ರಾಜಕೀಯ ಕಾರಣಕ್ಕಾಗಿ ತಮಿಳುನಾಡಿನ ಸಂಸದರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.

ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡಿನ ಸಂಸದರಿಗೆ ರಾಜ್ಯದ ಸಂಸದರು ಒಗ್ಗಟ್ಟಿನಿಂದ ಹೋರಾಡುವ ಮೂಲಕ ವಾಸ್ತವ ಚಿತ್ರಣವನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.

ಈ ಹಿಂದೆ ರಾಜ್ಯದ ಜಲ, ನೆಲ ಮತ್ತು ಭಾಷೆಯ ವಿಚಾರದಲ್ಲಿ ಪಕ್ಷಭೇದ ಮರೆತು ಸಂಸದರು ಹೋರಾಡಿದ್ದು, ಮೇಕೆದಾಟು ವಿಷಯದಲ್ಲೂ ಶ್ರಮಿಸಬೇಕು ಎಂದು ಸಚಿವ ಸದಾನಂದಗೌಡ ಹೇಳಿದರು.

ಹೋರಾಟದ ಮೊದಲ ಹಂತವಾಗಿ ಇದೇ 27ರಂದು ಸಂಸತ್‌ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ರಾಜ್ಯದ ಎಲ್ಲ ಸಂಸದರು ಒಂದಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಮಹದಾಯಿ ನದಿ ನೀರು ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸುವ ಕುರಿತು ಇದೇ ವೇಳೆ ಚರ್ಚೆ ನಡೆಸಲಾಯಿತು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ಸಂಸದರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.