
ನವದೆಹಲಿ: ಕೋಲ್ಕತ್ತದಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಕೆಮಿಕಲ್ ಬಯೊಲಾಜಿ (ಐಐಸಿಬಿ)ಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಬಗೆಹರಿಸುವುದಕ್ಕಾಗಿ ಸತ್ಯಶೋಧನಾ ತಂಡವನ್ನು ಕಳುಹಿಸಲು ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಪರಿಷತ್ತು (ಸಿಎಸ್‌ಐಆರ್) ನಿರ್ಧರಿಸಿದೆ.
ಐಐಸಿಬಿ ಕಾರ್ಯವೈಖರಿ ವಿರುದ್ಧ ಕಳೆದ ಮೂರು ವಾರಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಸಂಸ್ಥೆಯ ನಿರ್ದೇಶಕಿ ವಿಭಾ ಟಂಡನ್ ವಿರುದ್ಧ ಅಸಮಾಧಾನ ಭುಗೆಲೆದ್ದಿರುವುದೇ ಸಿಎಸ್‌ಐಆರ್‌ನ ಈ ನಿರ್ಧಾರಕ್ಕೆ ಕಾರಣ.
‘ಐಐಸಿಬಿ ದೇಶದ ಅತ್ಯಂತ ಹಳೆಯ ಪ್ರಯೋಗಾಲಯ. ನೂತನ ನಿರ್ದೇಶಕಿ ಆಡಳಿತದ ಅವಧಿಯಲ್ಲಿ ಸಂಸ್ಥೆಯ ಶೈಕ್ಷಣಿಕ ಸಾಧನೆ ಗಣನೀಯವಾಗಿ ಕುಸಿದಿದೆ. ರಾತ್ರೋರಾತ್ರಿ 50ಕ್ಖೂ ಅಧಿಕ ಗುತ್ತಿಗೆ ಆಧಾರದ ನೌಕರರನ್ನು ಅವರು ವಜಾಗೊಳಿಸಿದ್ದಾರೆ’ ಎಂದು ಕೆಲ ವಿಜ್ಞಾನಿಗಳು, ಸಂಶೋಧಕರು ಆರೋಪಿಸಿದ್ದಾರೆ.
‘ನನ್ನ ವಿರುದ್ಧದ ಆರೋಪಗಳ ಕುರಿತು ಸಿಎಸ್‌ಐಆರ್‌ನ ಕೇಂದ್ರ ಕಚೇರಿ ತನಿಖೆ ನಡೆಸುತ್ತಿದೆ. ಹೀಗಾಗಿ ಈ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಂಸ್ಥೆಯಲ್ಲಿ ಎಲ್ಲರೂ ಸರಿಯಾಗಿದ್ದು, ಇಂದು ನಾವು ಗಣರಾಜ್ಯೋತ್ಸವ ಆಚರಿಸಿದ್ಧೇವೆ’ ಎಂದು ವಿಭಾ ಟಂಡನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಬಯೊಮೆಡಿಕಲ್ ಕ್ಷೇತ್ರದಲ್ಲಿ ಸಂಶೋಧನೆಗಾಗಿ 1935ರಲ್ಲಿ ಐಐಸಿಬಿ ಸ್ಥಾಪಿಸಲಾಗಿದೆ. ಇದರ ಮುಖ್ಯಸ್ಥರಾಗಿರುವ ವಿಭಾ ಅವರು ಈ ಮೊದಲು, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸ್ಪೆಷಲ್ ಸೆಂಟರ್ ಫಾರ್ ಮಾಲೆಕ್ಯುಲರ್ ಮೆಡಿಸಿನ್‌ನಲ್ಲಿ ಪ್ರಾಧ್ಯಾಪಕಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.