ADVERTISEMENT

ಅತ್ಯಾಚಾರ ಪ್ರಕರಣ: ಬಂಧಿಸಿ ಕರೆದೊಯ್ಯುವಾಗ ತಪ್ಪಿಸಿಕೊಂಡ ಎಎಪಿ ಶಾಸಕ ಹರ್ಮೀತ್

ಪಿಟಿಐ
Published 2 ಸೆಪ್ಟೆಂಬರ್ 2025, 9:28 IST
Last Updated 2 ಸೆಪ್ಟೆಂಬರ್ 2025, 9:28 IST
<div class="paragraphs"><p>ಎಎಪಿ ಶಾಸಕ&nbsp;ಹರ್ಮೀತ್ ಸಿಂಗ್</p></div>

ಎಎಪಿ ಶಾಸಕ ಹರ್ಮೀತ್ ಸಿಂಗ್

   

ಪಟಿಯಾಲ: ಪಂಜಾಬ್‌ನ ಎಎಪಿ ಶಾಸಕ ಹರ್ಮೀತ್‌ ಸಿಂಗ್‌ ಪಠಾನ್‌ಮಾಜ್ರಾ ಅವರನ್ನು ಅತ್ಯಾಚಾರ ಆರೋಪದಲ್ಲಿ ಬಂಧಿಸಿ ಕರೆದೊಯ್ಯುವಾಗ ಬೆಂಬಲಿಗರು ಗಲಾಟೆ ಎಬ್ಬಿಸಿದ್ದರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 

ಹರಿಯಾಣದ ಕರ್ನಾಲ್‌ ಜಿಲ್ಲೆಯ ಡಾಬ್ರಿ ಗ್ರಾಮದಲ್ಲಿದ್ದ ಹರ್ಮೀತ್‌ ಅವರನ್ನು ಬಂಧಿಸಲು ಪೊಲೀಸ್ ತಂಡ ತೆರಳಿತ್ತು. ಈ ವೇಳೆ ಅವರ ಬೆಂಗಲಿಗರು ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ.

‘ಹರ್ಮೀತ್‌ ಅವರ ಮನೆಯ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸಲಾಯಿತು. ಆದರೆ ಗ್ರಾಮಸ್ಥರ ಗುಂಪು ಮತ್ತು ಕೆಲವು ಕಿಡಿಗೇಡಿಗಳು ಪೊಲೀಸ್‌ ತಂಡದ ಮೇಲೆ ಕಲ್ಲು ತೂರಾಟ ನಡೆಸಿ ಗುಂಡು ಹಾರಿಸಿದ್ದಾರೆ’ ಎಂದು ಪಟಿಯಾಲ ಅಪರಾಧ ತನಿಖಾ ಏಜೆನ್ಸಿಯ (ಸಿಐಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂಜಾಬ್‌ನ ಸನೌರ್‌ ಕ್ಷೇತ್ರದ ಶಾಸಕರಾಗಿರುವ ಹರ್ಮೀತ್‌ ಅವರು ಈ ವೇಳೆ ಬಂಧನದಿಂದ ತಪ್ಪಿಸಿಕೊಂಡು ಪರಾರಿಯಾದರು ಎಂದು ಹೇಳಿದ್ದಾರೆ.

ಶಾಸಕನ ಆಪ್ತ ಬಲ್ವಿಂದರ್‌ ಸಿಂಗ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಟೊಯೊಟ ಫಾರ್ಚುನರ್‌ ಕಾರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. 

ಹರ್ಮೀತ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಅತ್ಯಾಚಾರ, ವಂಚನೆ ಮತ್ತು ಬೆದರಿಕೆ ಹಾಕಿದ ಆರೋಪ ಹೊರಿಸಲಾಗಿದೆ. ಮೊಹಾಲಿ ಜಿಲ್ಲೆಯ ಜೀಕರ್‌ಪುರದ ಮಹಿಳೆಯೊಬ್ಬರು ನೀಡಿದ ದೂರಿನಂತೆ ಎಫ್‌ಐಆರ್‌ ದಾಖಲಾಗಿದೆ.

ಶಾಸಕರು ವಿಚ್ಛೇದಿತ ಎಂದು ಬಿಂಬಿಸಿ ಸಲುಗೆ ಬೆಳೆಸಿಕೊಂಡರಲ್ಲದೆ, 2021ರಲ್ಲಿ ತನ್ನನ್ನು ಮದುವೆಯಾಗಿದ್ದಾರೆ. ನಿರಂತರ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಫೇಸ್‌ಬುಕ್‌ನಲ್ಲಿ ವಿಡಿಯೊ ಪೋಸ್ಟ್‌ ಮಾಡಿದ್ದ ಹರ್ಮೀತ್‌, ಪಂಜಾಬ್‌ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ದೆಹಲಿ ಎಎಪಿ ನಾಯಕತ್ವ ‘ಪಂಜಾಬ್‌ನಲ್ಲಿ ಕಾನೂನುಬಾಹಿರವಾಗಿ ಆಡಳಿತ ನಡೆಸುತ್ತಿದೆ’ ಎಂದು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.