ಚಂಡೀಗಢ: ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ ನೀಡುವ ಮಸೂದೆಗೆ ಪಂಜಾಬ್ ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ಸರ್ಕಾರವು ಶನಿವಾರ ಅಧಿಸೂಚನೆ ಹೊರಡಿಸಿದೆ.
ಪಂಜಾಬ್ ಶಾಸಕರ (ಪಿಂಚಣಿ ಮತ್ತು ವೈದ್ಯಕೀಯ ಸೌಲಭ್ಯಗಳ ನಿಯಂತ್ರಣ) ತಿದ್ದುಪಡಿ ಮಸೂದೆ– 2022 ಅನ್ನು ಪಂಜಾಬ್ ವಿಧಾನಸಭೆಯಲ್ಲಿ ಜೂನ್ 30 ರಂದು ಅಂಗೀಕರಿಸಲಾಗಿತ್ತು.
‘ಒಬ್ಬ ಶಾಸಕ-ಒಂದು ಪಿಂಚಣಿ’ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಪಂಜಾಬಿಗಳಿಗೆ ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ. ಸರ್ಕಾರವು ಅಧಿಸೂಚನೆ ಹೊರಡಿಸಿದೆ’ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಶನಿವಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಈ ಕ್ರಮದಿಂದಾಗಿ ಸರ್ಕಾರಕ್ಕೆ ವಾರ್ಷಿಕವಾಗಿ ಸುಮಾರು ₹19.53 ಕೋಟಿ ರೂಪಾಯಿ ಉಳಿತಾಯವಾಗಲಿದೆ.
‘ಒಬ್ಬ ಶಾಸಕರಿಗೆ ಒಂದೇ ಪಿಂಚಣಿ ಸಿಗಬೇಕೆನ್ನುವುದು ನಮ್ಮ ನಿರ್ಧಾರ. ಅನೇಕ ಶಾಸಕರು ಎರಡು ಬಾರಿ, ಐದು ಅಥವಾ ಹತ್ತು ಬಾರಿ ಗೆದ್ದವರಿರುತ್ತಾರೆ. ಅಂಥವರು ಪ್ರತಿ ಅವಧಿಗೂ ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಇಂಥವರು ಕೆಲವರು ಸೋತಿರುತ್ತಾರೆ, ಇನ್ನೂ ಕೆಲವರು ಟಿಕೆಟ್ ಪಡೆಯಲೂ ಆಗದೇ ಮನೆಯಲ್ಲಿ ಕುಳಿತಿದ್ದರೂ ಲಕ್ಷಾಂತರ ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹೊರೆಯಾಗುತ್ತಿದೆ’ ಎಂದು ಭಗವಂತ ಮಾನ್ ಅವರು ಈ ಹಿಂದೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.