ಆರೋಪಿಗಳಿಂದ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳು
Credit: X/@DGPPunjabPolice
ಚಂಡೀಗಢ: ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಹ್ಯಾಂಡ್ಲರ್‌ಗಳಿಂದ ನಿರ್ವಹಿಸಲ್ಪಡುತ್ತಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ಅಮೃತಸರ ಪೊಲೀಸರು, ಐವರನ್ನು ಬಂಧಿಸಿದ್ದಾರೆ ಎಂದು ಪಂಜಾಬ್ ಪೊಲೀಸ್ ಇಲಾಖೆಯ ಮಹಾ ನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಆರೋಪಿಗಳಿಂದ ಎಕೆ ಸೈಗಾ 308 ಅಸಾಲ್ಟ್ ರೈಫಲ್, ಎರಡು ಮ್ಯಾಗಜೀನ್, ಎರಡು 9 ಎಂಎಂ ಗ್ಲಾಕ್ ಪಿಸ್ತೂಲ್, ಎಕೆ ರೈಫಲ್‌ನ 90 ಜೀವಂತ ಗುಂಡುಗಳನ್ನು ಸೇರಿದಂತೆ ₹7.50 ಲಕ್ಷ ನಗದು, ಒಂದು ಕಾರು ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಯಾದವ್ ಮಾಹಿತಿ ನೀಡಿದ್ದಾರೆ.
ಆರೋಪಿಗಳು ಪಾಕಿಸ್ತಾನ ಮೂಲದ ಐಎಸ್‌ಐ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆಂದು ತಿಳಿದುಬಂದಿದೆ. ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್‌ಪುರಿಯಾ ಆತನ ಸಹಚರ ನವ್ ಪಂಡೋರಿಗೆ ತಲುಪಿಸಲು ಉದ್ದೇಶಿಸಲಾಗಿತ್ತು ಎಂದು ಯಾದವ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಂಧಿತರನ್ನು ರಂಗರ್ ಗ್ರಾಮದ ನಿವಾಸಿಗಳಾದ ಜೋಬನ್‌ಜಿತ್ ಸಿಂಗ್ ಅಲಿಯಾಸ್ ಜೋಬನ್ ಮತ್ತು ಗೋರಾ ಸಿಂಗ್, ಅಮೃತಸರದ ರಸೂಲ್‌ಪುರ್ ಕಲ್ಲಾರ್‌ನ ಶೆನ್ಶನ್ ಅಲಿಯಾಸ್ ಶಾಲು ಮತ್ತು ಸನ್ನಿ ಸಿಂಗ್ ಹಾಗೂ ರೂಪನಗರದ ಜಸ್ಪ್ರೀತ್ ಸಿಂಗ್ ಅಲಿಯಾಸ್ ಮೋಟು ಎಂದು ಗುರುತಿಸಲಾಗಿದೆ ಎಂದು ಯಾದವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.