ADVERTISEMENT

ಹಳಿ ತಪ್ಪಿದ ಹೌರಾ-ನವದೆಹಲಿ ಪುರ್ವ ಎಕ್ಸ್‌ಪ್ರೆಸ್ ರೈಲು-ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 3:11 IST
Last Updated 20 ಏಪ್ರಿಲ್ 2019, 3:11 IST
ಕಾನ್ಪುರ ಸಮೀಪ ಹಳಿ ತಪ್ಪಿದ ಪುರ್ವ ಎಕ್ಸ್ ಪ್ರೆಸ್ ರೈಲು
ಕಾನ್ಪುರ ಸಮೀಪ ಹಳಿ ತಪ್ಪಿದ ಪುರ್ವ ಎಕ್ಸ್ ಪ್ರೆಸ್ ರೈಲು   

ನವದೆಹಲಿ: ಉತ್ತರಪ್ರದೇಶದ ಕಾನ್ಪುರ ಸಮೀಪಪುರ್ವ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ 12 ಬೋಗಿಗಳಲ್ಲಿದ್ದ ಪ್ರಯಾಣಿಕರ ಸ್ಥಿತಿ ಅಸ್ತವ್ಯಸ್ತಗೊಂಡು ಮೂವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.

ಕಾನ್ಪುರದ ರೂಮಾ ಗ್ರಾಮದಲ್ಲಿ ಬೆಳಗಿನ ಜಾವ 1 ಗಂಟೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ.ಪಶ್ಚಿಮ ಬಂಗಾಳದ ಹೌರಾದಿಂದ ನವದೆಹಲಿಗೆ ತೆರಳುತ್ತಿದ್ದ ಪುರ್ವ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. ರೈಲಿನಲ್ಲಿ 12 ಬೋಗಿಗಳ ಇದ್ದು, ಇವುಗಳಲ್ಲಿ 4 ಬೋಗಿಗಳು ಮಗುಚಿದಪರಿಣಾಮ ನಿದ್ರೆಯಲ್ಲಿದ್ದಪ್ರಯಾಣಿಕರು ದಿಗ್ಭ್ರಮೆಗೊಂಡಿದ್ದಾರೆ. ಇವರಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. 900 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ರೈಲಿನಲ್ಲಿಮೂವರನ್ನು ಹೊರತುಪಡಿಸಿ ಉಳಿದವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.ಘಟನೆಯಿಂದಾಗಿ ಮಹಿಳೆಯರು, ವೃದ್ದರು, ಮಕ್ಕಳು ತೀವ್ರ ಪರದಾಡುವಂತಾಗಿದ್ದು, ಬೆಳಗಿನ ಜಾವ 1 ಗಂಟೆಯಿಂದ ಬೆಳಗಿನ ಜಾವ 4ರವರೆಗೂ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿತ್ತು ಎನ್ನಲಾಗಿದೆ.

ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಆಗಮಿಸಿದ ಕಾನ್ಪುರ ಜಿಲ್ಲಾ ಮ್ಯಾಜೆಸ್ಟ್ರೇಟ್ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ. ಇದಲ್ಲದೆ, ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿವೆ.

ADVERTISEMENT

ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ: ಕಾನ್ಪುರ ಸಮೀಪ ಸಂಭವಿಸಿದ ರೈಲು ಅಪಘಾತದಲ್ಲಿ ಇದುವರೆಗೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಸ್ಸುಗಳಲ್ಲಿ ಪ್ರಯಾಣಿಕರನ್ನು ಸಮೀಪದ ಕಾನ್ಪುರ ಕೇಂದ್ರ ಸ್ಥಳಗಳಿಗೆ ಕಳುಹಿಸಿಕೊಡಲಾಗಿದೆ. ಪ್ರಯಾಣಿಕರನ್ನು ಕಾನ್ಪುರದಿಂದ ದೆಹಲಿಗೆ ಬೇರೆ ರೈಲುಗಳಲ್ಲಿ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ರೈಲ್ವೆ ಇಲಾಖೆಯವರು ಹೇಳಿದ್ದಾರೆ ಎಂದು ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ್ ವಿಶ್ವಾಸ್ ಪಂತ್ ತಿಳಿಸಿದ್ದಾರೆ.

ಯಾರೂ ಗಾಯಗೊಂಡಿಲ್ಲ: ಈ ಘಟನೆಯಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳನ್ನು ಬೇರೊಂದು ಮಾರ್ಗಕ್ಕೆ ಬದಲಾಯಿಸಲಾಗಿದೆ.ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಲ್ಲಾ ಪ್ರಯಾಣಿಕರನ್ನೂ ಬೇರೆಡೆ ಕಳುಹಿಸಿಕೊಡಲಾಗಿದೆ. ಎಆರ್‌ಟಿ ತಂಡ ಸೇರಿದಂತೆ ಸ್ಥಳಕ್ಕೆ ಎಲ್ಲಾ ಔಷಧಗಳನ್ನು ಹೊಂದಿರುವಂತಹ ರಕ್ಷಣಾ ತಂಡಗಳು ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿವೆ ಎಂದು ಭಾರತೀಯ ರೈಲ್ವೆ ಇಲಾಖೆಯ ಎಡಿಜಿ ಸ್ಮಿತಾ ವತ್ಸ್ ಶರ್ಮಾ ತಿಳಿಸಿದ್ದಾರೆ.

ತುರ್ತು ಸಹಾಯವಾಣಿ ಸಂಖ್ಯೆಗಳು: ರೈಲ್ವೆ ಹಳಿ ತಪ್ಪಿರುವ ಪರಿಣಾಮ ಪ್ರಯಾಣಿಕರ ಸ್ಥಿತಿ ಗತಿ ತಿಳಿದುಕೊಳ್ಳಲು ತುರ್ತು ದೂರವಾಣಿ ಸಂಖ್ಯೆಗಳನ್ನು ಭಾರತೀಯ ರೈಲ್ವೆ ನೀಡಿದೆ. ಹೌರಾದ ಎಸ್‌ಟಿಡಿ ಕೋಡ್ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಗಳು -(033) 26402241, 26402242, 26402243, 26413660. ಇಲ್ಲಿಗೆ ಕರೆ ಮಾಡಿ ಹೆಚ್ಚಿನ ವಿವರ ಪಡೆದುಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.