ADVERTISEMENT

ಉತ್ತರಾಖಂಡ: ಉಪಚುನಾವಣೆಯಲ್ಲಿ ಪುಷ್ಕರ್ ಸಿಂಗ್ ಧಾಮಿಗೆ ಜಯ, ಸಿಎಂ ಆಗಿ ಮುಂದುವರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2022, 6:44 IST
Last Updated 3 ಜೂನ್ 2022, 6:44 IST
ಪುಷ್ಕರ್‌ ಸಿಂಗ್‌ ಧಾಮಿ
ಪುಷ್ಕರ್‌ ಸಿಂಗ್‌ ಧಾಮಿ    

ಡೆಹ್ರಾಡೂನ್: ಉತ್ತರಾಖಂಡದ ಚಂಪಾವತ್‌ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪುಷ್ಕರ್‌ ಸಿಂಗ್‌ ಧಾಮಿ ಅವರು 55,000ಕ್ಕೂ ಹೆಚ್ಚುಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ.

ಚಂಪಾವತ್ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ ಎಂದು ಧಾಮಿ ಟ್ವೀಟ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಉತ್ತರಾಖಂಡ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮದನ್ ಕೌಶಿಕ್ ಅವರು ಧಾಮಿ ಅವರನ್ನು ಅಭಿನಂದಿಸಿದ್ದಾರೆ.

ADVERTISEMENT

ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಧಾಮಿ ಅವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿತ್ತು. ಫೆಬ್ರುವರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಖತಿಮಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಧಾಮಿ ಅವರು ಸೋಲು ಅನುಭವಿಸಿದ್ದರು. ಸೋತಿದ್ದರೂ, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅವರು, ಆರು ತಿಂಗಳ ಒಳಗಾಗಿ ಶಾಸನಸಭೆಗೆ ಆಯ್ಕೆಯಾಗಬೇಕಿತ್ತು.

ಚಂಪಾವತ್‌ನ ಮಾಜಿ ಶಾಸಕ ಕೈಲಾಶ್‌ ಗೆಹ್‍‌ತೊರಿ ಅವರು ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಧಾಮಿ ಅವರು ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು. ಮೇ 31ರಂದು ಮತದಾನ ನಡೆದಿತ್ತು.

ಧಾಮಿ ಅವರಿಗೆ ಕಾಂಗ್ರೆಸ್‌ನ ಅಭ್ಯರ್ಥಿ ನಿರ್ಮಲಾ ಗೆಹ್‌ತೊರ್ ಅವರು ಪ್ರಮುಖ ಪ್ರತಿಸ್ಪರ್ಧಿಯಾಗಿದ್ದರು. ಸಮಾಜವಾದಿ ಪಕ್ಷದ ಮನೋಜ್‌ ಕುಮಾರ್‌ ಭಟ್‌ ಮತ್ತು ಸ್ವತಂತ್ರ ಅಭ್ಯರ್ಥಿ ಹಿಮಾಂಶು ಗಡ್ಕೊಟಿ ಸ್ಪರ್ಧೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.