ADVERTISEMENT

ರಾಯ್‌ಗೆ ಜೀವಾವಧಿ ಶಿಕ್ಷೆ | ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಅನುಮತಿ

ಪಿಟಿಐ
Published 21 ಜನವರಿ 2025, 10:29 IST
Last Updated 21 ಜನವರಿ 2025, 10:29 IST
<div class="paragraphs"><p>ನ್ಯಾಯಾಲಯ ತೀರ್ಪು</p></div>

ನ್ಯಾಯಾಲಯ ತೀರ್ಪು

   

ಕೋಲ್ಕತ್ತ: ಇಲ್ಲಿನ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಹತ್ಯೆ ಮಾಡಿದ ಅಪರಾಧಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಸಿಯಾಲದಹ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತ ಹೈಕೋರ್ಟ್ ಅನುಮತಿ ನೀಡಿದೆ.

ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಏಕೈಕ ಅಪರಾಧಿಯಾಗಿರುವ ಸಂಜಯ್ ರಾಯ್‌ಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿ ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರು ನ್ಯಾಯಮೂರ್ತಿ ದೇಬಂಗ್ಸು ಬಸಾಕ್ ಅವರಿದ್ದ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸಿದ್ದಾರೆ.

ADVERTISEMENT

ಪ್ರಕರಣ ಸಂಬಂಧ ಸಿಯಾಲದಹದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಸೋಮವಾರ ನೀಡಿದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ರಾಜ್ಯ ಸರ್ಕಾರವು ಹೈಕೋರ್ಟ್‌ ಮೊರೆಹೋಗಿತ್ತು.

ರಾಯ್ ಎಸಗಿರುವ ಅಪರಾಧವು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ಗಳ ಸಾಲಿಗೆ ಬರುವುದಿಲ್ಲವಾದ ಕಾರಣ ಈತನಿಗೆ ಮರಣದಂಡನೆ ವಿಧಿಸಿಲ್ಲ ಎಂದು ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಹೇಳಿದ್ದರು. ಮೃತ ವೈದ್ಯ ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರವಾಗಿ ₹17 ಲಕ್ಷ ನೀಡಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದರು.

ಅಪರಾಧಿ ರಾಯ್, ಆತನ ಪರ ವಕೀಲರು ಹಾಗೂ ಸಂತ್ರಸ್ತೆಯ ಕುಟುಂಬದ ಸದಸ್ಯರ ಹೇಳಿಕೆಗಳನ್ನು ಆಲಿಸಿದ ನಂತರ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದರು. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 64ರ ಅಡಿಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ ವಿಧಿಸಲಾಗುತ್ತಿದೆ ಎಂದು ನ್ಯಾಯಾಧೀಶರು ಹೇಳಿದ್ದರು.

ಬಿಎನ್‌ಎಸ್‌ನ ಸೆಕ್ಷನ್ 103(1)ರ ಅಡಿಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಲಾಗಿದೆ. ಸೆಕ್ಷನ್‌ 66ರ ಅಡಿಯಲ್ಲಿ ಅಪರಾಧಿಗೆ ಸಾಯುವವರೆಗೂ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ದಾಸ್ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.