ADVERTISEMENT

ಪಕ್ಷದ ಅಧ್ಯಕ್ಷರಾಗಿ ರಾಹುಲ್‌ ಮುಂದುವರಿಯಬೇಕು: ರಾಜಸ್ಥಾನ ಕಾಂಗ್ರೆಸ್‌ ನಿರ್ಣಯ 

​ಪ್ರಜಾವಾಣಿ ವಾರ್ತೆ
Published 29 ಮೇ 2019, 11:01 IST
Last Updated 29 ಮೇ 2019, 11:01 IST
   

ಜೈಪುರ: ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಹುದ್ದೆ ತೊರೆಯುವ ನಿರ್ಧಾರ ಕೈಗೊಂಡಿರುವ ರಾಹುಲ್‌ ಗಾಂಧಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದು, ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ಮನವಿ ಮಾಡಿರಾಜಸ್ಥಾನ ಕಾಂಗ್ರೆಸ್‌ ಬುಧವಾರ ನಿರ್ಣಯ ಕೈಗೊಂಡಿದೆ.

ರಾಜಸ್ಥಾನ ಕಾಂಗ್ರೆಸ್‌ನ ಉಸ್ತುವಾರಿ ಅವಿನಾಶ್‌ ಪಾಂಡೆ ಅವರ ನೇತೃತ್ವದಲ್ಲಿ ಜೈಪುರದ ಪಕ್ಷದ ಕಚೇರಿಯಲ್ಲಿ ಬುಧವಾರ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಸೇರಿದಂತೆ ಪಕ್ಷದ ಪ್ರಮುಖರ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್‌ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂಬ ನಿರ್ಣಯವನ್ನು ಸಭೆ ಕೈಗೊಂಡಿತು.

ಸಭೆಗೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌, ‘ ಜೈಪುರದ ಪಕ್ಷದ ಕಚೇರಿಯಲ್ಲಿ ಇಂದು ನಿರ್ಣಾಯಕ ಸಭೆ ನಡೆಯುತ್ತಿದೆ. ರಾಹುಲ್‌ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ನಾವು ನಿರ್ಣಯ ಕೈಗೊಳ್ಳಲಿದ್ದೇವೆ,’ ಎಂದು ಹೇಳಿದ್ದರು.

ಇನ್ನು ದೆಹಲಿಯ ರಾಹುಲ್‌ ಗಾಂಧಿ ನಿವಾಸದ ಬಳಿ ಕಾಂಗ್ರೆಸ್‌ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಪಕ್ಷದ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಅವರೇ ಮುಂದುವರಿಯಬೇಕು ಎಂದು ಒತ್ತಾಯಿಸಿದ್ದಾರೆ. ಪಕ್ಷಕ್ಕೆ ರಾಹುಲ್‌ ಅವರ ನೇತೃತ್ವ ಅಗತ್ಯ ಎಂದು ಪೋಸ್ಟರ್‌ಗಳನ್ನು ಹಿಡಿದುಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.