ADVERTISEMENT

ಚುನಾವಣಾ ಆಯೋಗ ‘ಪಕ್ಷಪಾತಿ’: ರಾಹುಲ್‌ ಗಾಂಧಿ ವಾಗ್ದಾಳಿ

ಪಿಟಿಐ
Published 26 ಜುಲೈ 2025, 16:11 IST
Last Updated 26 ಜುಲೈ 2025, 16:11 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಅನಂದ್ (ಗುಜರಾತ್): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ‘ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸತತ ಸೋಲಿಗೆ ಚುನಾವಣಾ ಆಯೋಗವೇ ಕಾರಣ’ ಎಂದು ಆರೋಪಿಸಿದ್ದಾರೆ.

ಪಕ್ಷ ಸಂಘಟನೆಯನ್ನು ಬಲಪಡಿಸಲು ಆಯೋಜಿಸಿರುವ ‘ಸಂಘಟನ್ ಸುಜನ್‌ ಆಭಿಯಾನ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗವನ್ನು ‘ಪಕ್ಷಪಾತಿ’ ಎಂದು ಟೀಕಿಸಿದ್ದಾಗಿ ಮೂಲಗಳು ಹೇಳಿವೆ. 2027ರ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವನ್ನು ಬಲಪಡಿಸುವುದು ಈ ಕಾರ್ಯಕ್ರಮದ ಉದ್ದೇಶ.

ಆಯೋಗವನ್ನು ಪಕ್ಷಪಾತಿ ಎಂದು ದೂರಲು ಅವರು ಕ್ರಿಕೆಟ್‌ನ ‘ಅಂಪೈರ್‌’ ಪದವನ್ನು ಬಳಸಿದರು ಎಂದು ಸಭೆಯಲ್ಲಿ ಪಾಲ್ಗೊಂಡ ಸುರೇಂದ್ರನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನೌಶಾದ್‌ ಸೋಳಂಕಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ADVERTISEMENT

‘ಕ್ರಿಕೆಟ್‌ನಲ್ಲಿ ನೀವು ಪದೇ ಪದೇ ಬೇಗನೇ ಔಟಾದರೆ ನಿಮ್ಮ ಮೇಲೆಯೇ ಅನುಮಾನ ಮೂಡಬಹುದು. ಆದರೆ ನೀವು ಔಟ್‌ ಆಗುತ್ತಿರುವುದು ನಿಮ್ಮ ತಪ್ಪಿನಿಂದಲ್ಲ. ಅಂಪೈರ್‌ ಪಕ್ಷಪಾತಿಯಾಗಿರುವ ಕಾರಣದಿಂದಲೇ ನೀವು ಔಟಾಗುತ್ತಿರುವುದು ನಿಮ್ಮ ಅರಿವಿಗೆ ಬಂದಿದೆ’ ಎಂದು ರಾಹುಲ್‌ ಹೇಳಿರುವುದಾಗಿ ಸೋಳಂಕಿ ವಿವರಿಸಿದ್ದಾರೆ.

‘ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ನಡೆಸಿದ ಅಕ್ರಮಗಳಿಂದಲೇ 2017ರ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ’ ಎಂದು ರಾಹುಲ್‌ ಆರೋಪಿಸಿದ್ದಾಗಿ ತಿಳಿದುಬಂದಿದೆ.

ಗುಜರಾತ್‌ನಲ್ಲಿ ಬಿಜೆಪಿ ಸೋಲಿಸುವುದು ಮುಖ್ಯ: ಬಿಜೆಪಿಯನ್ನು ಅದರ ಪ್ರಮುಖ ನೆಲೆ ಎನಿಸಿರುವ ಗುಜರಾತ್‌ನಲ್ಲಿ ಸೋಲಿಸುವುದು ಬಹಳ ಮುಖ್ಯ ಎಂಬುದನ್ನು ರಾಹುಲ್‌ ಸಭೆಯಲ್ಲಿ ಒತ್ತಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಉತ್ತರ ಪ್ರದೇಶ, ಬಿಹಾರ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಬಿಜೆಪಿಯನ್ನು ಸೋಲಿಸಲು ನಾವು ಪ್ರಯತ್ನಿಸಬೇಕು. ನಮಗೆ ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾದರೆ, ಆ ಪಕ್ಷವನ್ನು ಎಲ್ಲ ಕಡೆಗಳಲ್ಲೂ ಸೋಲಿಸಬಹುದು’ ಎಂದು ಅವರು ಹೇಳಿದ್ದಾರೆ.

ಇ.ಸಿ ನಿಲುವು: ಎಡಿಆರ್‌ ಪ್ರಶ್ನೆ

ನವದೆಹಲಿ: ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಆಧಾರ್‌ ಕಾರ್ಡ್‌ ಮತದಾರರ ಗುರುತಿನ ಪತ್ರ (ಎಪಿಕ್) ಮತ್ತು ಪಡಿತರ ಚೀಟಿಗಳನ್ನು ಕ್ರಮಬದ್ಧ ದಾಖಲೆಗಳನ್ನಾಗಿ ಪರಿಗಣಿಸಲು ಚುನಾವಣಾ ಆಯೋಗ ನಿರಾಕರಿಸಿರುವುದನ್ನು ಸ್ವಯಂ ಸೇವಾ ಸಂಸ್ಥೆ ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಆಧಾರ್‌ ಕಾರ್ಡ್‌ ಎಪಿಕ್ ಮತ್ತು ಪಡಿತರ ಚೀಟಿಗಳನ್ನು ಕ್ರಮಬದ್ಧ ದಾಖಲೆಗಳನ್ನಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ (ಇ.ಸಿ) ಸುಪ್ರೀಂ ಕೋರ್ಟ್‌ ಜುಲೈ 10ರಂದು ಸೂಚಿಸಿತ್ತು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದಕ್ಕೆ ಪರಿಗಣಿಸಲಾಗುವ 11 ದಾಖಲೆಗಳ ಪಟ್ಟಿಯಲ್ಲಿ ಈ ಮೂರು ದಾಖಲೆಗಳು ಒಳಗೊಂಡಿರಲಿಲ್ಲ. ಹೀಗಾಗಿ ಆಧಾರ್‌ ಎಪಿಕ್‌ ಹಾಗೂ ಪಡಿತರ ಚೀಟಿಗಳನ್ನು ಪರಿಗಣಿಸದೇ ಇರುವುದಕ್ಕೆ ಸೂಕ್ತ ಕಾರಣಗಳನ್ನು ನೀಡುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಆಧಾರ್‌ ಎಪಿಕ್‌ ಹಾಗೂ ಪಡಿತರ ಚೀಟಿಗಳನ್ನು ಸುಲಭವಾಗಿ ನಕಲು ಮಾಡಲು ಸಾಧ್ಯ ಎಂದು ತನ್ನ ನಿರ್ಧಾರವನ್ನು ಇ.ಸಿ ಸಮರ್ಥಿಸಿಕೊಂಡಿತ್ತು. ಆಯೋಗದ ಈ ನಿಲುವನ್ನು ಎಡಿಆರ್‌ ಪ್ರಶ್ನಿಸಿದೆ. ‘ಇ.ಸಿ ಅನುಮೋದಿಸಿರುವ ಪಟ್ಟಿಯಲ್ಲಿರುವ ಎಲ್ಲ 11 ದಾಖಲೆಗಳನ್ನು ಕೂಡಾ ಸುಳ್ಳು ಮಾಹಿತಿ ನೀಡಿ ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ಗಮನಿಸಬೇಕು. ಇ.ಸಿಯ ವಾದ ಅಧಾರರಹಿತ ಮತ್ತು ಅಸಮಂಜಸ’ ಎಂದು ಎಡಿಆರ್‌ ತನ್ನ ಪ್ರತಿವಾದದಲ್ಲಿ ತಿಳಿಸಿದೆ.

‘ಅಸ್ಸಾಂ: 40 ಲಕ್ಷ ಮಂದಿಯ ಹೆಸರು ಕೈಬಿಡಲು ಸಿದ್ಧತೆ’

ಗುವಾಹಟಿ: ‘ಬಿಹಾರದಲ್ಲಿ ಕೈಗೊಂಡಿರುವ ಎಸ್‌ಐಆರ್‌ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೂ ಮುನ್ನ ಅಸ್ಸಾಂನಲ್ಲೂ ನಡೆಸಲಿದೆ. ಅಲ್ಲಿನ ಮತದಾರರ ಪಟ್ಟಿಯಿಂದ 30 ಲಕ್ಷದಿಂದ 40 ಲಕ್ಷ ಮಂದಿಯನ್ನು ಕೈಬಿಡಲಿದೆ’ ಎಂದು ರಾಜ್ಯಸಭೆಯ ಟಿಎಂಸಿ ಸದಸ್ಯರಾದ ಸುಷ್ಮಿತಾ ದೇವ್‌ ಶನಿವಾರ ಆರೋಪಿಸಿದ್ದಾರೆ. ‘ಎಸ್‌ಐಆರ್ ಮೂಲಕ ಬಿಹಾರದಲ್ಲಿ ನಡೆಸುತ್ತಿರುವುದನ್ನು ಆಯೋಗವು ಅಸ್ಸಾಂ ಪಶ್ಚಿಮ ಬಂಗಾಳ ತಮಿಳುನಾಡು ಕೇರಳ ಮತ್ತು ದೇಶದ ಎಲ್ಲಾ ರಾಜ್ಯಗಳಲ್ಲಿ ಪುನರಾವರ್ತಿಸಲಿದೆ’ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.