ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ನವದೆಹಲಿ: ‘ಪಕ್ಷದ ಅಭೂತಪೂರ್ವ ಚುನಾವಣಾ ಗೆಲುವನ್ನು ‘ವಂಚನೆ’ ಎಂದು ಕರೆಯುವ ಮೂಲಕ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ದೇಶದ ಜನರನ್ನು ಅವಮಾನಿಸಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.
‘ಇಂತಹ ಬೇಜವಾಬ್ದಾರಿತನದ, ನಾಚಿಕೆ ಇಲ್ಲದ ಚಾರಿತ್ರ್ಯ ಹೊಂದಿರುವ ಕಾಂಗ್ರೆಸ್ ಅನ್ನು ಮತದಾರರು ತಿರಸ್ಕರಿಸುವುದು ಮುಂದುವರಿಯಲಿದೆ’ ಎಂದು ಪಕ್ಷದ ಮುಖಂಡರು ವಾಗ್ವಾಳಿ ನಡೆಸಿದ್ದಾರೆ.
ಮತದಾರರು ಬಿಜೆಪಿ ಪರವಾಗಿ ತೀರ್ಪು ನೀಡಿದ್ದಾರೆ. ಇದರಿಂದ ಹತಾಶೆ ಮತ್ತು ಕೋಪದಲ್ಲಿ ಕುದಿಯುತ್ತಿರುವ ರಾಹುಲ್ ಗಾಂಧಿ, ಚುನಾವಣಾ ಆಯೋಗವನ್ನು ದೂರಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ಭಾರಿ ಪ್ರಮಾಣದಲ್ಲಿ ಮತ ಕಳ್ಳತನ ನಡೆದಿದೆ ಎನ್ನುವ ಅವರ ಆರೋಪವು ಹತಾಶ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಹೇಳಿದ್ದಾರೆ.
‘ಚುನಾವಣಾ ಆಯೋಗ ಮತ್ತು ಅಧಿಕಾರದಲ್ಲಿರುವ ಪಕ್ಷ ಸೇರಿಕೊಂಡು ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ಕ್ರಿಮಿನಲ್ ವಂಚನೆ ನಡೆಸುತ್ತಿದೆ’ ಎಂದು ರಾಹುಲ್ ಆರೋಪಿಸಿದ್ದರು. ಇದನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್, ‘ರಾಹುಲ್ ಚುನಾವಣಾ ಆಯೋಗವನ್ನೇ ವಂಚಕ ಎಂದು ಕರೆಯುವ ಮೂಲಕ ಲಜ್ಜೆಗೇಡಿತನದ ಎಲ್ಲ ಮಿತಿಗಳನ್ನು ಮೀರಿದ್ದಾರೆ’ ಎಂದಿದ್ದಾರೆ.
‘ನರೇಂದ್ರ ಮೋದಿ ಅವರು 2015ರಿಂದ ಚುನಾವಣೆಯನ್ನು ಗೆಲ್ಲುತ್ತಿದ್ದಾರೆ. ನೀವು (ರಾಹುಲ್) ಇದನ್ನು ‘ವಂಚನೆ’ ಎಂದು ಕರೆಯುವ ಮೂಲಕ, ಅವರಿಗೆ ಮತ ನೀಡಿ ಗೆಲ್ಲಿಸಿದ ದೇಶದ ಜನರನ್ನೇ ಅವಮಾನಿಸಿದ್ದೀರಿ’ ಎಂದು ಅವರು ಸಂಸತ್ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಮಾನನಷ್ಟ ಪ್ರಕರಣದಲ್ಲಿ ಜಾಮೀನು ಪಡೆಯಲು ಇಡೀ ದೇಶ ಸುತ್ತುತ್ತಿರುವ ನೀವು, ಇನ್ನೊಬ್ಬರನ್ನು ‘ವಂಚಕ’ ಎಂದು ಕರೆಯುತ್ತಿರುವುದು ನಿಮ್ಮ ಹೊಣೆಗೇಡಿತನ ತೋರಿಸುತ್ತದೆ. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಬಗ್ಗೆ ಹೇಗೆ ಮಾತನಾಡಬೇಕೆಂಬುದೇ ನಿಮಗೆ ತಿಳಿದಿಲ್ಲ’ ಎಂದು ರವಿಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು. ‘ನಿಮ್ಮ ಈ ರೀತಿಯ ನಡತೆಯಿಂದಲೇ ಜನರು ಕಾಂಗ್ರೆಸ್‌ಗೆ ಮತ ನೀಡುವುದಿಲ್ಲ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.