ದೇವೇಂದ್ರ ಫಡಣವೀಸ್ ಹಾಗೂ ರಾಹುಲ್ ಗಾಂಧಿ
ಪಿಟಿಐ ಚಿತ್ರಗಳು
ಮುಂಬೈ: 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗದೊಂದಿಗೆ ಬಿಜೆಪಿ ಶಾಮೀಲಾಗಿ ಮತಗಳನ್ನು ಕದ್ದಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯು ಸಂಪೂರ್ಣ ಆಧಾರರಹಿತ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಗೋವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಹುಲ್ ಗಾಂಧಿಯವರ ಮೆದುಳನ್ನು ಒಮ್ಮೆ ಪರಿಶೀಲಿಸಬೇಕು ಎಂದು ನಾನು ಭಾವಿಸುತ್ತೇನೆ. ಒಂದೋ ಅವರ ಮೆದುಳನ್ನು ಯಾರೋ ಕದ್ದಿರಬಹುದು ಅಥವಾ ಅವರ ಮೆದುಳಿನಲ್ಲಿ ಚಿಪ್ ಕಾಣೆಯಾಗಿರಬೇಕು. ಆದ್ದರಿಂದಲೇ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತಗಳ್ಳತನವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಘಟಕ ಸೇರಿದಂತೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಬಿಜೆಪಿ ಮತ್ತು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿವೆ.
‘ನೀವು ಯಾವುದೇ ರಾಜಕೀಯ ಸಿದ್ಧಾಂತಕ್ಕೆ ಸೇರಿದವರಾಗಿದ್ದರೂ, ನೀವು ನಿಜವಾದ ದೇಶಭಕ್ತರಾಗಿದ್ದರೆ, ನಿಜವಾದ ಭಾರತೀಯರಾಗಿದ್ದರೆ, ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಹೇಗೆ ಬಯಲು ಮಾಡಿದ್ದಾರೆ ಎಂಬುದನ್ನು ನೋಡಬೇಕು’ ಎಂದು ಶಿವಸೇನಾ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಹೇಳಿದ್ದಾರೆ.
‘ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುತ್ತಿಲ್ಲ ಎಂದು ಚುನಾವಣಾ ಆಯೋಗ ಖಚಿತಪಡಿಸಿಕೊಂಡಿದೆ ಎಂದು ನಾವು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇವೆ. ರಾಹುಲ್ ಗಾಂಧಿ ಪುರಾವೆಗಳೊಂದಿಗೆ ಚುನಾವಣಾ ಆಯೋಗದ ನಿಜ ಸ್ವರೂಪವನ್ನು ಬಹಿರಂಗಪಡಿಸಿದ್ದಾರೆ. ರಾಹುಲ್ ಪ್ರಶ್ನೆಗಳಿಗೆ ಚುನಾವಣಾ ಆಯೋಗವು ಉತ್ತರಿಸಬೇಕು’ ಎಂದು ಆದಿತ್ಯ ಠಾಕ್ರೆ ಒತ್ತಾಯಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗವು (ಇಸಿಐ) ತನ್ನ ಹೆಸರನ್ನು 'ಸಂಪೂರ್ಣ ರಾಜಿ ಆಯೋಗ' ಎಂದು ಬದಲಾಯಿಸುವುದು ಸೂಕ್ತ ಠಾಕ್ರೆ ಗುಡುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.