ರಾಹುಲ್ ಗಾಂಧಿ, ಚುನಾವಣಾ ಆಯೋಗ
ಪಿಟಿಐ ಚಿತ್ರ
ನವದೆಹಲಿ: ಕರ್ನಾಟಕದ ಆಳಂದ ಕ್ಷೇತ್ರದ ಮತಗಳ್ಳರನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸಿದ್ದಾರೆ ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ ತಳ್ಳಿಹಾಕಿದೆ. ಈ ಆರೋಪಗಳೆಲ್ಲ ಸುಳ್ಳು ಮತ್ತು ಆಧಾರಹಿತ ಎಂದು ಹೇಳಿದೆ.
ರಾಹುಲ್ ಗಾಂಧಿ ಮಾಡಿರುವ ಆರೋಪಗಳು ತಪ್ಪಾಗಿದ್ದು, ಆಧಾರರಹಿತವಾಗಿವೆ. ರಾಹುಲ್ ಗಾಂಧಿ ತಪ್ಪುಕಲ್ಪನೆ ಮಾಡಿಕೊಂಡಿರುವಂತೆ ಯಾವುದೇ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
‘2023ರ, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಮತದಾರರ ಹೆಸರುಗಳನ್ನು ಅಳಿಸಲು ಕೆಲವು ವಿಫಲ ಪ್ರಯತ್ನಗಳು ನಡೆದವು. ಈ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗದಿಂದಲೇ ಪ್ರಕರಣ ದಾಖಲಿಸಲಾಗಿತ್ತು’ ಎಂದು ಆಯೋಗ ಹೇಳಿದೆ.
2018ರಲ್ಲಿ ಸುಭಾಶ್ ಗುತ್ತೇದಾರ್ (ಬಿಜೆಪಿ) ಮತ್ತು 2023ರಲ್ಲಿ ಬಿ.ಆರ್. ಪಾಟೀಲ್ (ಕಾಂಗ್ರೆಸ್) ಆಳಂದ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ ಎಂದು ಅದು ಹೇಳಿದೆ.
ಪ್ರಾಸಂಗಿಕವಾಗಿ, ಕರ್ನಾಟಕ ಸಿಐಡಿ ಮತ್ತು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಪದೇ ಪದೇ ಕೇಳುತ್ತಿದ್ದರೂ ಸಹ, ಅಳಂದದಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಅಳಿಸುವ ಪ್ರಯತ್ನಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂಬ ಆರೋಪಗಳಿಗೆ ಚುನಾವಣಾ ಆಯೋಗವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2023ರ ಮಾರ್ಚ್‌ನಿಂದ ಹಿಡಿದು ಕಳೆದ 18 ತಿಂಗಳುಗಳಿಂದ ಮಾಹಿತಿಯನ್ನು ಕೋರುತ್ತಿರುವುದಾಗಿ ಕರ್ನಾಟಕ ಸಿಐಡಿ ಹೇಳಿದೆ. ಈ ವರ್ಷದ ಮಾರ್ಚ್‌ನಲ್ಲೂ ಕಡೆಯದಾಗಿ ಮಾಹಿತಿ ಕೋರಿದ್ದಾಗಿ ಅದು ಹೇಳಿದೆ.
ಮತದಾರರ ಪಟ್ಟಿಯಿಂದ ಕೆಲ ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಿಸಿದವರನ್ನು ಸಿಇಸಿ ರಕ್ಷಿಸುತ್ತಿರುವ ಬಗ್ಗೆ ಸಾಕ್ಷ್ಯಗಳಿವೆ ಎಂದು ರಾಹುಲ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.