ADVERTISEMENT

ವಿಪಕ್ಷ ನಾಯಕನ ಸ್ಥಾನವೋ, ನಿಶಾನ್‌ ಎ ಪಾಕಿಸ್ತಾನವೋ: ರಾಹುಲ್‌ಗೆ ಬಿಜೆಪಿ ಪ್ರಶ್ನೆ

ಡೆಕ್ಕನ್ ಹೆರಾಲ್ಡ್
Published 23 ಮೇ 2025, 13:38 IST
Last Updated 23 ಮೇ 2025, 13:38 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಭಾರತದ ವಿದೇಶಾಂಗ ನೀತಿ ಕುಸಿದಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ನೀವು ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ಬಯಸುತ್ತೀರಾ ಅಥವಾ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ನಿಶಾನ್‌–ಎ–ಪಾಕಿಸ್ತಾನ್ ನಿರೀಕ್ಷಿಸುತ್ತಿದ್ದಾರಾ’ ಎಂದು ಕೇಳಿದೆ.

‘ಪೊಳ್ಳು ಮಾತುಗಳನ್ನಾಡಬೇಡಿ’ ಎಂದು ‍ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗುರುವಾರ ವಾಗ್ದಾಳಿ ನಡೆಸಿದ್ದರು. ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿರುದ್ಧವೂ ವಾಗ್ದಾಳಿ ಮುಂದುವರಿಸಿದ್ದ ರಾಹುಲ್, ‘ಭಾರತವನ್ನು ಪಾಕಿಸ್ತಾನದೊಂದಿಗೆ ಏಕೆ ಜೋಡಿಸಲಾಗುತ್ತಿದೆ? ಪಾಕಿಸ್ತಾನವನ್ನು ಟೀಕಿಸಲು ಯಾವ ರಾಷ್ಟ್ರಗಳೂ ಭಾರತವನ್ನೇಕೆ ಬೆಂಬಲಿಸುತ್ತಿಲ್ಲ? ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಕೇಳಿದವರಾರು?’ ಎಂದಿದ್ದಾರೆ.

‘ಆಪರೇಷನ್ ಸಿಂಧೂರ ಕುರಿತು ಪಾಕಿಸ್ತಾನಕ್ಕೆ ಜೈಶಂಕರ್ ಮೊದಲೇ ಮಾಹಿತಿ ನೀಡಿದ್ದರು’ ಎಂದು ರಾಹುಲ್ ಈ ಮೊದಲು ಆರೋಪಿಸಿದ್ದರು. ‘ಇದು ಆಧಾರ ರಹಿತ ಆರೋಪ’ ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು.

ADVERTISEMENT

‘ಮೋದಿ ಅವರೇ, ಪೊಳ್ಳು ಮಾಹಿತಿಯನ್ನು ಜನರಿಗೆ ನೀಡುವುದನ್ನು ನಿಲ್ಲಿಸಿ. ಭಯೋತ್ಫಾದನೆಯ ವಿಷಯದಲ್ಲಿ ಪಾಕಿಸ್ತಾನದ ಮಾತನ್ನು ಏಕೆ ನಂಬುತ್ತಿದ್ದೀರಿ? ಭಾರತದ ಹಿತಾಸಕ್ತಿಯನ್ನು ಬಲಿಕೊಟ್ಟು ಟ್ರಂಪ್ ಎದುರು ಏಕೆ ಬಾಗಿದಿರಿ? ಕ್ಯಾಮೆರಾ ಮುಂದೆ ಮಾತ್ರ ನಿಮ್ಮ ರಕ್ತವೇಕೆ ಕುದಿಯುತ್ತದೆ?’ ಎಂದು ಕೇಳಿದ್ದರು.

ರಾಹುಲ್ ಗಾಂಧಿ ಅವರ ಈ ಹೇಳಿಕೆ ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ‘ರಾಹುಲ್ ಅವರೇ, ನೀವು ಯಾರ ಪರ ಇದ್ದೀರಿ ಎಂಬುದನ್ನು ಈಗಲೇ ಸ್ಪಷ್ಟಪಡಿಸಿ. ವಿಪಕ್ಷ ನಾಯಕನೋ ಅಥವಾ ಪಾಕಿಸ್ತಾನದ ಉನ್ನತ ಪ್ರಶಸ್ತಿಯನ್ನೋ’ ಎಂದು ಕೇಳಿದೆ.

‘ಅಸಂಬದ್ಧ ಹೇಳಿಕೆಗಳ ಮೂಲಕ ಭಾರತದ ಸೇನೆಯನ್ನು ರಾಹುಲ್ ಗಾಂಧಿ ಅವಹೇಳನ ಮಾಡುತ್ತಿದ್ದಾರೆ ಮತ್ತು ದೇಶದ ಭದ್ರತೆಯ ವಿಷಯದಲ್ಲಿ ಕೇಡನ್ನು ಬಯಸುತ್ತಿದ್ದಾರೆ’ ಎಂದು ಆರೋಪಿಸಿದೆ.

'ಅಂತರರಾಷ್ಟ್ರೀಯ ವೇದಿಕೆಯಲ್ಲಿ ದೇಶದ ಕೀರ್ತಿಗೆ ಹಾನಿಯುಂಟು ಮಾಡುವಂತ ಹೇಳಿಕೆಗಳನ್ನು ನೀಡುವ ಅವರ ಬಾಲಿಶ ವರ್ತನೆ ಮುಂದುವರಿದಿದೆ’ ಎಂದು ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.