ADVERTISEMENT

ನರವಣೆಯವರ ಪುಸ್ತಕದ ಭಯದಿಂದ ಮೋದಿ ಸಂಸತ್ತಿಗೆ ಬರುತ್ತಿಲ್ಲ: ರಾಹುಲ್ ಗಾಂಧಿ

ಪಿಟಿಐ
Published 9 ಫೆಬ್ರುವರಿ 2026, 11:17 IST
Last Updated 9 ಫೆಬ್ರುವರಿ 2026, 11:17 IST
<div class="paragraphs"><p>ನರವಣೆಯವರ ಪುಸ್ತಕದೊಂದಿಗೆ ರಾಹುಲ್ ಗಾಂಧಿ</p></div>

ನರವಣೆಯವರ ಪುಸ್ತಕದೊಂದಿಗೆ ರಾಹುಲ್ ಗಾಂಧಿ

   

– ಪಿಟಿಐ

ನವದೆಹಲಿ: ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆಯವರ ಪುಸ್ತಕಕ್ಕೆ ಹೆದರಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಭಾಷಣಕ್ಕೆ ಮೇಲೆ ವಂದನಾ ನಿರ್ಣಯ ಸಲ್ಲಿಸಲು ಲೋಕಸಭೆಗೆ ಬರಲಿಲ್ಲ, ಸಂಸದರಿಗೆ ಹೆದರಿ ಅಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ADVERTISEMENT

ಸದಸ್ಯರಿಂದ ಮೋದಿಗೆ ಬೆದರಿಕೆ ಇದೆ ಎಂದಾದರೆ ಎಫ್‌ಐಆರ್ ದಾಖಲಿಸಿ ಎಂದೂ ರಾಹುಲ್ ಗಾಂಧಿ ಸವಾಲೆಸೆದಿದ್ದಾರೆ.

ಪ್ರಧಾನಿಗೆ ವಿರೋಧ ಪಕ್ಷಗಳ ಸದಸ್ಯರಿಂದ ಬೆದರಿಕೆ ಇದೆ. ಹೀಗಾಗಿ ಸದನಕ್ಕೆ ಬರಬೇಡಿ ಎಂದು ನಾನೇ ಹೇಳಿದ್ದೆ ಎಂದು ಸ್ಪೀಕರ್ ಓಂ ಬಿರ್ಲಾ ಗುರುವಾರ ಹೇಳಿದ್ದರು.

‘ಬಜೆಟ್ ಮೇಲೆ ಚರ್ಚೆ ನಡೆಸಲು ಸರ್ಕಾರಕ್ಕೆ ಭಯ. ಯಾಕೆಂದರೆ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ, ಅದು ನಡೆದ ರೀತಿ ಹಾಗೂ ರೈತರ ಮೇಲೆ ಅದು ಬೀರುವ ಪರಿಣಾಮ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ಸದಸ್ಯರಿಂದ ‍‍ಪ್ರಧಾನಿಗೆ ಬೆದರಿಕೆ ಇದೆ ಎಂದು ಹರಿಬಿಟ್ಟಿರುವುದು ನಮ್ಮ ಮನಸ್ಸನ್ನು ಕಲಕಿದೆ. ಹಾಗೆ ಮಾಡುವ ಪ್ರಶ್ನೆಯೇ ಇಲ್ಲ. ಪ್ರಧಾನಿ ಸಂಸತ್ತಿಗೆ ಬರದೇ ಇದ್ದಿದ್ದು ಸದಸ್ಯರಿಂದ ಬೆದರಿಕೆ ಇದೆ ಎನ್ನುವ ಕಾರಣಕ್ಕೆ ಅಲ್ಲ, ಸತ್ಯವನ್ನು ಎದುರಿಸಲು ಅವರಿಂದ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ಕಾಂಗ್ರೆಸ್ ಸದಸ್ಯರು ಪ್ರಧಾನಿ ಮೇಲೆ ಹಲ್ಲೆ ಮಾಡುವ ಪ್ರಶ್ನೆಯೇ ಇಲ್ಲ. ಪ್ರಧಾನಿಗೆ ಸಂಸತ್ತಿಗೆ ಬರಲು ಧೈರ್ಯ ಬೇಕು. ಪ್ರಧಾನಿ ಮೇಲೆ ಹಲ್ಲೆ ನಡೆಸುವುದಾಗಿ ಯಾರಾದರೂ ಹೇಳಿದರೆ, ‌ಅವರ ಮೇಲೆ ದಯವಿಟ್ಟು ಎಫ್‌ಆರ್ ದಾಖಲಿಸಿ, ಬಂಧಿಸಿ. ನೀವ್ಯಾಕೆ ಹಾಗೆ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ನಮಗೆ ಈ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕು. ಈ ಬಗ್ಗೆ ಚರ್ಚೆ ನಡೆಸಲು ವಿರೋಧ ಪಕ್ಷಗಳು ಉತ್ಸುಕವಾಗಿವೆ. ಆದರೆ ಸರ್ಕಾರ ಏನು ಹೇಳುತ್ತದೆ ಎನ್ನುವುದನ್ನು ನೋಡಬೇಕು. ಚರ್ಚೆ ನಡೆಸಲು ಸರ್ಕಾರ ಹೆದರುತ್ತಿದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ನಾವು ಏನು ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಅವರಿಗೆ ಭಯವಿದೆ. ನರವಣೆಯವರ ಪುಸ್ತಕವನ್ನು ನಾನು ಅವರಿಗೆ ಹಸ್ತಾಂತರಿಸುವುದರ ಬಗ್ಗೆಯೂ ಪ್ರಧಾನಿಗೆ ಭಯ ಇದೆ’ ಎಂದು ಹೇಳಿದ್ದಾರೆ.

‘ಅದರ ಬಗ್ಗೆ ಮಾತನಾಡಲು ಸರ್ಕಾರ ನನ್ನನ್ನು ಬಿಡುತ್ತಿಲ್ಲ. ಹೀಗಾಗಿ ಅವರು ಕಲಾಪವನ್ನು ಮುಂದೂಡಿದ್ದಾರೆ. ನನಗೆ ಮಾತನಾಡಲು ಅವಕಾಶವೇ ಕೊಡುತ್ತಿಲ್ಲ. ಇದು ಮೂರು–ನಾಲ್ಕು ಬಾರಿ ಆಗಿದೆ. ಪುಸ್ತಕವನ್ನು ಉಲ್ಲೇಖಿಸಬೇಡಿ ಎಂದು ಮೊದಲು ಹೇಳಿದರು. ನಾನು ನಿಯತಕಾಲಿಕೆಯನ್ನು ಉಲ್ಲೇಖಿಸುವುವಾಗ, ಅದನ್ನೂ ತಡೆದರು. ನಾನು ಅದರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದಾಗಲೂ ಬಿಡಲಿಲ್ಲ. ಅದರ ಬಗ್ಗೆ ನಾನು ಮಾತನಾಡುವುದು ಅವರಿಗೆ ಬೇಡ’ ಎಂದು ರಾಹುಲ್ ಹೇಳಿದ್ದಾರೆ.

ಪುಸ್ತಕ ಪ್ರಕಟವೇ ಆಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಆದರೆ ಪುಸ್ತಕ ಪ್ರಕಟವಾಗಿದ್ದು, ಅದರ ಪ್ರತಿ ನಮ್ಮೊಂದಿಗೆ ಇದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.