ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಭಾರತದ ಆರ್ಥಿಕತೆ ನೆಲಕಚ್ಚಿದೆ ಎಂಬುದು ಮನವರಿಕೆಯಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಗುರುವಾರ) ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಆರ್ಥಿಕತೆ, ರಕ್ಷಣಾ ವಲಯ ಮತ್ತು ವಿದೇಶಾಂಗ ನೀತಿಗಳನ್ನು ನಾಶಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಸಂಸತ್ ಭವನದ ಆವರಣದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, 'ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಯಸಿದಂತೆ ವ್ಯಾಪಾರ ಒಪ್ಪಂದ ಏರ್ಪಡಲಿದೆ. ಟ್ರಂಪ್ ಹೇಳಿದನ್ನೆಲ್ಲ ಪ್ರಧಾನಿ ಮೋದಿ ಮಾಡಲಿದ್ದಾರೆ' ಎಂದು ಹೇಳಿದ್ದಾರೆ.
ಭಾರತದಿಂದ ಅಮೆರಿಕಕ್ಕೆ ಆಮದಾಗುವ ಎಲ್ಲ ಸರಕುಗಳ ಮೇಲೆ ಆಗಸ್ಟ್ 1ರಿಂದ ಶೇಕಡ 25ರಷ್ಟು ಸುಂಕ ವಿಧಿಸಲಾಗುತ್ತದೆ ಎಂದು ಘೋಷಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಳಿಕ ಭಾರತದ ಆರ್ಥಿಕತೆ ನೆಲಕಚ್ಚಿದೆ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, 'ಅವರು (ಟ್ರಂಪ್) ಸರಿಯಾಗಿಯೇ ಹೇಳಿದ್ದಾರೆ. ಭಾರತದ ಪ್ರಧಾನಿ, ಹಣಕಾಸು ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಈ ವಿಚಾರ ತಿಳಿದಿದೆ. ಅಮೆರಿಕ ಅಧ್ಯಕ್ಷರು ಸತ್ಯವನ್ನು ಹೇಳಿದ್ದಕ್ಕಾಗಿ ನನಗೆ ಸಂತೋಷವಾಗಿದೆ' ಎಂದು ಹೇಳಿದ್ದಾರೆ.
'ಕೋಟ್ಯಧಿಪತಿ ಗೌತಮ್ ಅದಾನಿ ಅವರಿಗೆ ಸಹಾಯ ಮಾಡುವುದಕ್ಕಾಗಿ ದೇಶದ ಆರ್ಥಿಕತೆಯನ್ನು ಬಿಜೆಪಿ ನಾಶಗೊಳಿಸಿದೆ' ಎಂದು ಅವರು ಆರೋಪಿಸಿದ್ದಾರೆ.
'ಭಾರತದ ವಿದೇಶಾಂಗ ನೀತಿ ಅದ್ಭುತ ಎಂದು ವಿದೇಶಾಂಗ ಸಚಿವರು ಭಾಷಣ ಮಾಡುತ್ತಾರೆ. ಆದರೆ ಒಂದೆಡೆ ಅಮೆರಿಕ ನಿಂದಿಸುತ್ತಿದ್ದು, ಮತ್ತೊಂದೆಡೆ ಚೀನಾ ಸಹ ಬೆನ್ನಟ್ಟುತ್ತಿದೆ. ಮೂರನೇಯದಾಗಿ ವಿದೇಶಗಳಿಗೆ ನಿಯೋಗಗಳನ್ನು ಕಳುಹಿಸಿದಾಗ ಯಾವುದೇ ರಾಷ್ಟ್ರವು ಪಾಕಿಸ್ತಾನವನ್ನು ಖಂಡಿಸಿಲ್ಲ. ಅವರಿಗೆ ದೇಶವನ್ನು ಮುನ್ನಡೆಸಲು ಗೊತ್ತಿಲ್ಲ' ಎಂದು ರಾಹುಲ್ ಉಲ್ಲೇಖಿಸಿದ್ದಾರೆ.
'ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಮಾಡಿದ್ದೇನೆ ಎಂದು ಟ್ರಂಪ್ 20 ಸಲ ಹೇಳಿದ್ದಾರೆ. ಭಾರತಕ್ಕೆ ಐದು ಯುದ್ಧ ವಿಮಾನ ನಷ್ಟವಾಗಿದೆ ಎಂದೂ ಹೇಳಿದ್ದಾರೆ. ಈಗ ಭಾರತದ ಮೇಲೆ ಶೇ 25ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇವೆಲ್ಲದಕ್ಕೂ ಪ್ರಧಾನಿ ಮೋದಿ ಏಕೆ ಉತ್ತರ ನೀಡುತ್ತಿಲ್ಲ? ಅವರಿಗೆ ಭಯ ಏಕೆ ಕಾಡುತ್ತಿದೆ' ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.