ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ಗಾಜಿಯಾಬಾದ್ (ಉ.ಪ್ರದೇಶ): ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಸಂಸದ ಕೆ.ಸಿ. ವೇಣುಗೋಪಾಲ್ ಅವರನ್ನು ಒಳಗೊಂಡ ಕಾಂಗ್ರೆಸ್ ನಿಯೋಗವು ಉತ್ತರ ಪ್ರದೇಶದ ಹಿಂಸಾಚಾರ ಪೀಡಿತ ಸಂಭಲ್ ನಗರಕ್ಕೆ ತೆರಳಲು ಬುಧವಾರ ಹೊರಟಿತ್ತು. ಆದರೆ, ದೆಹಲಿ–ಗಾಜಿಯಾಬಾದ್ ಗಡಿಯಲ್ಲಿ ಉತ್ತರ ಪ್ರದೇಶದ ಪೊಲೀಸರು ಈ ನಿಯೋಗವನ್ನು ತಡೆದರು.
ಸಂಭಲ್‌ಗೆ ತೆರಳಲು ಅನುಮತಿ ನೀಡುವಂತೆ ಕೋರಿ ಸತತ ಎರಡು ಗಂಟೆ ನಿಯೋಗವು ಪೊಲೀಸರೊಂದಿಗೆ ಮಾತುಕತೆ ನಡೆಸಿತು. ಆದರೆ, ಅನುಮತಿಯನ್ನು ನಿರಾಕರಿಸಲಾಯಿತು. ಮಧ್ಯಾಹ್ನ 12.30ರ ಸುಮಾರಿಗೆ ನಿಯೋಗವು ದೆಹಲಿಗೆ ವಾಪಸಾಯಿತು
ನನ್ನ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳಲಾಗಿದೆ: ರಾಹುಲ್ ಗಾಂಧಿ
ಸಂಭಲ್‌ಗೆ ಹೋಗಿ, ಅಲ್ಲಿನ ಜನರನ್ನು ಭೇಟಿ ಮಾಡಿ, ಅಲ್ಲೇನಾಗಿದೆ ಎಂದು ತಿಳಿದುಕೊಳ್ಳಬೇಕು. ಆದರೆ, ಅಲ್ಲಿಗೆ ಹೋಗಲು ಪೊಲೀಸರು ನಮಗೆ ಅನುಮತಿ ನೀಡುತ್ತಿಲ್ಲ. ವಿರೋಧ ಪಕ್ಷದ ನಾಯಕನಾಗಿ ಅಲ್ಲಿಗೆ ಹೋಗುವುದು ನನ್ನ ಹಕ್ಕು... ಒಬ್ಬನೇ ಹೋಗುವುದಕ್ಕೂ ನಾನು ತಯಾರಿದ್ದೇನೆ, ಪೊಲೀಸರ ಜೊತೆಯಲ್ಲಿ ಹೋಗುವುದಕ್ಕೂ ಸಿದ್ಧನಿದ್ದೇನೆ. ಆದರೆ, ಈ ಯಾವುದನ್ನೂ ಪೊಲೀಸರು ಒಪ್ಪುತ್ತಿಲ್ಲ. ಕೆಲವು ದಿನಗಳ ನಂತರ ಬಂದರೆ ಸಂಭಲ್‌ಗೆ ಹೋಗಲು ಅನುಮತಿ ನೀಡುವುದಾಗಿ ಹೇಳಿದ್ದಾರೆ. ಇದು ನನ್ನ ಹಕ್ಕನ್ನು ಕಸಿದುಕೊಳ್ಳುವಂಥ ನಡವಳಿಕೆ. ಪೊಲೀಸರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ನೋಡಿ, ಇದು ನವ ಭಾರತ. ಸಂವಿಧಾನವನ್ನು ಅಂತ್ಯಗೊಳಿಸಲು ಇಲ್ಲಿ ಎಲ್ಲ ಯತ್ನಗಳೂ ನಡೆಯುತ್ತಿವೆ. ಆದರೆ, ನಾವು ಹೋರಾಡುತ್ತಲೇ ಇರುತ್ತೇವೆ – ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಸಂಭಲ್ ಪ್ರವೇಶ ಯಾಕೆ ಸಾಧ್ಯವಿಲ್ಲ?
ಸಂಭಲ್‌ನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ಜಾರಿಯಲ್ಲಿದೆ. ಸಮಸ್ಯೆ ಉಂಟಾಗಬಹುದು ಅಥವಾ ಅಪಾಯ ಎದುರಾಗಬಹುದು ಎಂಬ ಶಂಕೆಯ ಸಂದರ್ಭದಲ್ಲಿ ತುರ್ತಾಗಿ ಈ ಆದೇಶ ಹೊರಡಿಸುವ ಅಧಿಕಾರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನೀಡಲಾಗಿದೆ. ಹೊರಗಿನವರು ಸಂಭಲ್ ಪ್ರವೇಶಕ್ಕೆ ನಿಷೇಧ ಹೇರಿ ಮ್ಯಾಜಿಸ್ಟ್ರೇಟ್ ಅವರು ಆದೇಶ ನೀಡಿದ್ದಾರೆ. ಈ ಆದೇಶವು ಡಿ.31ರವರೆಗೆ ಜಾರಿಯಲ್ಲಿರಲಿದೆ
‘ರಾಹುಲ್ ಗಾಂಧಿ ಅವರು ಸಂಭಲ್ ಪ್ರವೇಶಿಸುವುದನ್ನು ತಡೆಯಿರಿ’ ಎಂದು ಸಂಭಲ್‌ನ ಜಿಲ್ಲಾ ಮ್ಯಾಜಿಸ್ಟ್ರೇಟರ್ ರಾಜೇಂದ್ರ ಪೇಸಿಯಾ ಅವರು ಗೌತಮ್ ಬುದ್ಧ ನಗರ, ಗಾಜಿಯಾಬಾದ್ ಪೊಲೀಸ್ ಆಯುಕ್ತರಿಗೆ ಮತ್ತು ಅಮರೋಹ ಹಾಗೂ ಬುಲಂದ್‌ಶಹರ್ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಲಿಖತವಾಗಿ ಮಂಗಳವಾರವೇ ಆದೇಶ ನೀಡಿದ್ದರು
ಕೋರ್ ವೋಟ್’ ಸೆಳೆಯುವ ಸ್ಪರ್ಧೆ: ಬಿಜೆಪಿ
ನಿಮಗೆ ಸಂಭಲ್‌ಗೆ ಹೋಗಲೇಬೇಕು ಎಂದಿದ್ದರೆ, ಆ ಕುರಿತು ಪೊಲೀಸರಿಗೆ ಮುಂಚಿತವಾಗಿಯೇ ಮಾಹಿತಿ ನೀಡುತ್ತಿದ್ದೀರಿ. ನೀವು ವಿರೋಧ ಪಕ್ಷದ ನಾಯಕ. ನಿಮಗೆ ಬಿಗಿ ಭದ್ರತೆ ನೀಡಬೇಕಾಗುತ್ತದೆ. ಆದರೆ, ನೀವು ಮುಂಚೆಯೇ ಮಾಹಿತಿ ನೀಡಿಲ್ಲ. ಕೋರ್ ವೋಟ್ (ಮುಸ್ಲಿಂ ಮತಗಳನ್ನು ಉಲ್ಲೇಖಿಸಲು ಬಿಜೆಪಿ ಇತ್ತೀಚೆಗೆ ಈ ಪದವನ್ನು ಬಳಸುತ್ತಿದೆ) ಪಡೆದುಕೊಳ್ಳಲು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಮಧ್ಯೆ ಸ್ಪರ್ಧೆ ಇದೆ. ಸಂಭಲ್ ಜನರ ಕುರಿತು ನಿಮಗೇನೂ ಅನುಕಂಪ ಇಲ್ಲ. ಉತ್ತಮ ಫೋಟೊಶೂಟ್‌ಗಾಗಿ ತೆರಳಿದ್ದೀರಿ ಅಷ್ಟೆ
ಸಂಚಾರ ದಟ್ಟಣೆ:
ದೆಹಲಿ–ಮೀರಠ್ ಎಕ್ಸ್‌ಪ್ರೆಸ್‌ವೇನಲ್ಲಿ ಭಾರಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಈ ಹೆದ್ದಾರಿಯಲ್ಲಿ ಸಂಚರಿಸಿದ ಎಲ್ಲ ವಾಹನಗಳನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದರು. ಹೆದ್ದಾರಿಯಲ್ಲಿ ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ತಪಾಸಣೆಯ ಕಾರಣದಿಂದ ನಿಧಾನಗತಿಯಲ್ಲಿ ವಾಹನಗಳು ಸಂಚರಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು
ಜೈಲರ್, ಉಪಜೈಲರ್ ಅಮಾನತು
ಸಂಭಲ್ ಹಿಂಸಾಚಾರಕ್ಕೆ ಸಂಬಂಧಿಸಿ ವಿಕ್ರಮ್ ಸಿಂಗ್ ಯಾದವ್ ಹಾಗೂ ಪ್ರವೀಣ್ ಸಿಂಗ್ ಅವರನ್ನು ಬಂಧಿಸಿ ಮುರಾದಾಬಾದ್ ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿದೆ. ಸಮಾಜವಾದಿ ಪಕ್ಷದ ಕೆಲವು ಮುಖಂಡರು ಇವರನ್ನು ಸೋಮವಾರ ಭೇಟಿಯಾಗಿದ್ದರು. ಭೇಟಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪೊಲೀಸರು ತಮಗೆ ಹಿಂಸೆ ನೀಡುತ್ತಿದ್ದಾರೆ ಎಂದು ಬಂಧಿತರು ಹೇಳುತ್ತಿದ್ದಾರೆ’ ಎಂದಿದ್ದರು. ಆರೋಪಿಗಳ ಭೇಟಿಗೆ ಎಸ್‌ಪಿ ಮುಖಂಡರಿಗೆ ಅನುಮತಿ ನೀಡಿದ್ದಕ್ಕಾಗಿ ಜೈಲರ್ ಹಾಗೂ ಉಪಜೈಲರ್ ಅನ್ನು ಉತ್ತರ ಪ್ರದೇಶ ಸರ್ಕಾರ ಬುಧವಾರ ಅಮಾನತು ಮಾಡಿದೆ
ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಕ್ರಮವು ಸರ್ಕಾರದ ಗೂಂಡಾಗಿರಿಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಅರಾಜಕತೆ ಇದೆಆರಾಧನಾ ಮಿಶ್ರಾ ಮೋನಾ, ಉತ್ತರ ಪ್ರದೇಶದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ
ರಾಹುಲ್‌ನನ್ನು ತಡೆಯಲು ಬರುವುದಿಲ್ಲ. ಆತ ವಿರೋಧ ಪಕ್ಷದ ನಾಯಕ. ಸಂತ್ರಸ್ತರನ್ನು ಭೇಟಿ ಮಾಡಲು ಅವನಿಗೆ ಸಾಂವಿಧಾನಿಕ ಹಕ್ಕಿದೆಪ್ರಿಯಾಂಕಾ ಗಾಂಧಿ ವಾದ್ರಾ, ವಯನಾಡ್ ಸಂಸದೆ
ಸಂವಿಧಾನವನ್ನು ಹರಿದು ಚೂರು ಮಾಡಿ, ತಮ್ಮ ವಿಭಜನಕಾರಿ ಕಾರ್ಯಸೂಚಿಯನ್ನು ಊರುವಲ್ಲಿ ಬಿಜೆಪಿ–ಆರ್‌ಎಸ್‌ಎಸ್ ನಿರತವಾಗಿದೆ. ಸಂಭಲ್ ಸಂತ್ರಸ್ತರನ್ನು ಭೇಟಿ ಮಾಡದಂತೆ ವಿರೋಧ ಪಕ್ಷದ ನಾಯಕನನ್ನು ತಡೆದಿರುವುದು ಅವರ ಕಾರ್ಯಸೂಚಿಗೆ ಸಾಕ್ಷ್ಯದಂತಿದೆಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಸಂಭಲ್‌ನಲ್ಲಿ ಶಾಂತಿ ನೆಲೆಸಿದ ಬಳಿಕ ಬೇಕಾದರೆ ಅವರು (ವಿರೋಧ ಪಕ್ಷದವರು) ಅಲ್ಲಿಗೆ ಹೋಗಿ ವಲಿಮಾದಲ್ಲಿ (ಮುಸ್ಲಿಮರ ಮದುವೆ ಶಾಸ್ತ್ರ) ಭಾಗಿಯಾಗಲಿಬ್ರಿಜೇಶ್ ಪಾಠಕ್, ಉಪಮುಖ್ಯಮಂತ್ರಿ, ಉತ್ತರ ಪ್ರದೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.