ADVERTISEMENT

ಮಗಳ ಮೇಲೆ ಅತ್ಯಾಚಾರ; ಸಮಾಜಕ್ಕೆ ಕಂಟಕ ಎಂದ ಕೋರ್ಟ್: ಅಪರಾಧಿಗೆ ಜೀವಾವಧಿ ಶಿಕ್ಷೆ

ಪಿಟಿಐ
Published 25 ಮಾರ್ಚ್ 2025, 13:19 IST
Last Updated 25 ಮಾರ್ಚ್ 2025, 13:19 IST
   

ನವದೆಹಲಿ: ‘ತನ್ನ 17 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಆಕೆ ಗರ್ಭವತಿಯಾಗುವಂತೆ ಮಾಡಿದ ವ್ಯಕ್ತಿಯ ಕೃತ್ಯವು ಸಮಾಜಕ್ಕೆ ನಿಜವಾದ ಅಪಾಯವಾಗಿದೆ’ ಎಂದು ಅಭಿಪ್ರಾಯಪಟ್ಟ ದೆಹಲಿ ನ್ಯಾಯಾಲಯವು, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

2021ರಲ್ಲಿ ನಡೆದಿದ್ದ ಈ ಪ್ರಕರಣವು ಪೋಕ್ಸೊ ಅಡಿಯಲ್ಲಿ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ನ್ಯಾಯಾಧೀಶ ಅಮಿತ್ ಸಹರಾವತ್ ಅವರು ಮಂಗಳವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.

‘ಈ ಪ್ರಕರಣದ ಅಪರಾಧಿಯು ಅತ್ಯಂತ ಹೀನ ಕೃತ್ಯ ಎಸಗಿದ್ದಾನೆ. ತಾನು ಜನ್ಮ ನೀಡಿದ ಮಗಳ ಮೇಲೆಯೇ ಅತ್ಯಾಚಾರವೆಸಗಿ, ಆಕೆ ಗರ್ಭ ಧರಿಸುವಂತೆ ಮಾಡಿರುವಂತ ಕೃತ್ಯ ಸ್ವೀಕಾರಾರ್ಹವಲ್ಲ. ಮಗಳ ಮೇಲೆಯೇ ತಂದೆ ಅತ್ಯಾಚಾರ ಎಸಗಿದ್ದನ್ನು ಕಂಡಿರುವ ಸಮಾಜ ಆಘಾತಗೊಂಡಿದೆ. ಈತ ತನ್ನ ಇತರ ಮಕ್ಕಳ ಮೇಲೂ ಇಂಥದ್ದೇ ಕೃತ್ಯ ನಡೆಸುವ ಅಪಾಯವಿದೆ. ಅಪಾಯಕಾರಿಯಾಗಿರುವ ಈ ವ್ಯಕ್ತಿಯನ್ನು ಎಷ್ಟು ಸಾಧ್ಯವೋ ಅಷ್ಟು ಕಾಲ ಸಮಾಜದಿಂದ ದೂರವಿಡುವುದು ನ್ಯಾಯಾಲಯದ ಕರ್ತವ್ಯ. ಇಂಥವರನ್ನು ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ನ್ಯಾಯಾಧೀಶರು ಹೇಳಿದರು.

ADVERTISEMENT

‘ಆದರೂ, ಈ ಪ್ರಕರಣ ಅಪರೂಪದಲ್ಲಿ ಅಪರೂವಲ್ಲದ ಕಾರಣ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆತ ಬದುಕಿರುವವರೆಗೂ ಜೈಲಿನಲ್ಲಿರುವಂತೆ ಆದೇಶಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.