
ಪೊಲೀಸರು ಜಪ್ತಿ ಮಾಡಿರುವ ಇಕೊ ಸ್ಪೋರ್ಟ್ ಕಾರು
ನವದೆಹಲಿ: ದೆಹಲಿ ಕಾರು ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಡಾ. ಉಮರ್ ನಬಿ ದಾಳಿಯ ವೇಳೆ ಬಳಸಿದ್ದ ಎಂದು ಶಂಕಿಸಲಾದ ಕೆಂಪು ಬಣ್ಣದ ಫೋರ್ಡ್ ಇಕೊ ಸ್ಪೋರ್ಟ್ ಕಾರನ್ನು (DL 10 CK 0458) ಫರಿದಾಬಾದ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಪ್ತಿ ಮಾಡಿರುವ ಕಾರನ್ನು ಖಂಡವಾಲಿ ಗ್ರಾಮದ ಬಳಿ ನಿಲ್ಲಿಸಲಾಗಿತ್ತು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಕಾರನ್ನು ಬಳಸಿಕೊಳ್ಳಲಾಗಿತ್ತು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಂಕಿತ ವಾಹನವು ಉಮರ್ ನಬಿ ಹೆಸರಿನಲ್ಲಿ ನೋಂದಾಯಿಸಲಾಗಿದ್ದು, ದೆಹಲಿ ಪೊಲೀಸರು ಕಾರಿನ ವಿವರಗಳನ್ನು ಉತ್ತರ ಪ್ರದೇಶ ಮತ್ತು ಹರಿಯಾಣ ಪೊಲೀಸರೊಂದಿಗೆ ಹಂಚಿಕೊಂಡಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಂಪು ಬಣ್ಣದ ಫೋರ್ಡ್ ಇಕೊ ಸ್ಪೋರ್ಟ್ ಕಾರನ್ನು ಹುಡುಕುವಂತೆ ಪೊಲೀಸರು ದೆಹಲಿಯ ಎಲ್ಲ ಪೊಲೀಸ್ ಠಾಣೆಗಳು, ಗಡಿ ಚೆಕ್‌ಪೋಸ್ಟ್‌ಗಳಿಗೆ ಮಾಹಿತಿ ನೀಡಿದ್ದರು. ಶಂಕಿತರು ದಾಳಿ ನಡೆಸುವ ವೇಳೆ ಹುಂಡೈ ಐ20 ಜತೆಗೆ ಮತ್ತೊಂದು ಕಾರು ಬಳಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕಾರನ್ನು ಪತ್ತೆ ಹಚ್ಚಲು ಐದು ತಂಡಗಳನ್ನು ರಚಿಸಲಾಗಿತ್ತು ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.