ADVERTISEMENT

ಐತಿಹಾಸ ಕೆಂಪು ಕೋಟೆ ಸ್ವಾಧೀನ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಪಿಟಿಐ
Published 5 ಮೇ 2025, 13:03 IST
Last Updated 5 ಮೇ 2025, 13:03 IST
ಕೆಂಪು ಕೋಟೆ
ಕೆಂಪು ಕೋಟೆ   

ನವದೆಹಲಿ: ಮೊಘಲ್ ದೊರೆ ಎರಡನೇ ಬಹದ್ದೂರ್ ಷಾ ಜಾಫರ್ ಅವರ ಮರಿಮೊಮ್ಮಗನ ಪತ್ನಿ ಎಂದು ವಾದಿಸಿ, ಐತಿಹಾಸಿಕ ಕೆಂಪು ಕೋಟೆಯ ಸ್ವಾಧೀನ ಕೇಳಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸು‍ಪ್ರೀಂ ಕೋರ್ಟ್ ಸೋಮವಾರ ತಳ್ಳಿ ಹಾಕಿದೆ.

ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಯನ್ನು ಅನರ್ಹ ಹಾಗೂ ತಪ್ಪು ಕಲ್ಪನೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ಸಂಜಯ್ ಕುಮಾರ್ ಅವರಿದ್ದ ಪೀಠ ಅರ್ಜಿಯನ್ನು ತಳ್ಳಿ ಹಾಕಿದೆ.

ಅಲ್ಲದೆ ಅರ್ಜಿದಾರರ ಪರ ವಕೀಲೆ ಸುಲ್ತಾನ ಬೇಗಂ ಅವರಿಗೆ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಲೂ ನಿರಾಕರಿಸಿತು.

ADVERTISEMENT

ಅರ್ಜಿದಾರರು ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರನ ಕುಟುಂಬಸ್ಥೆ ಎನ್ನುವುದನ್ನು ಅವರ ವಕೀಲರು ಕೋರ್ಟ್‌ಗೆ ಹೇಳಿದರು.

‘ಕೇವಲ ಕೆಂಪು ಕೋಟೆ ಮಾತ್ರ ಯಾಕೆ? ಆಗ್ರಾ, ಫತೇಪುರ ಸಿಕ್ರಿ ಬೇಡವೇ?’ ಎಂದು ಸಿಜೆಐ ಪ್ರಶ್ನಿಸಿದರು.

ಕಳೆದ ವರ್ಷ ಡಿಸೆಂಬರ್ 13ರಂದು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು, 2021 ಡಿಸೆಂಬರ್‌ನಲ್ಲಿ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪಿನ ವಿರುದ್ಧ ಬೇಗಂ ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಎರಡೂವರೆ ವರ್ಷಗಳಿಗೂ ಹೆಚ್ಚು ವಿಳಂಬದ ನಂತರ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಅರ್ಜಿಯನ್ನು ವಜಾಗೊಳಿಸುವ ವೇಳೆ ಹೈಕೋರ್ಟ್ ಹೇಳಿತ್ತು.

ತಮ್ಮ ಅನಾರೋಗ್ಯ ಮತ್ತು ಮಗಳ ನಿಧನದ ಕಾರಣ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಬೇಗಂ ಕೋರ್ಟ್‌ಗೆ ತಿಳಿಸಿದ್ದರು.

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರು ಕುಟುಂಬದ ಆಸ್ತಿಯನ್ನು ಕಸಿದುಕೊಂಡರು. ನಂತರ ಚಕ್ರವರ್ತಿಯನ್ನು ದೇಶದಿಂದ ಗಡೀಪಾರು ಮಾಡಲಾಯಿತು. ಕೆಂಪು ಕೋಟೆಯ ಸ್ವಾಧೀನವನ್ನು ಮೊಘಲರಿಂದ ಬಲವಂತವಾಗಿ ಕಸಿದುಕೊಳ್ಳಲಾಯಿತು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಏಕೆಂದರೆ ಅವರು ತಮ್ಮ ಪೂರ್ವಜ ಎಡರನೇ ಬಹದ್ದೂರ್ ಷಾ ಜಾಫರ್ ಅವರಿಂದ ಕೆಂಪುಕೋಟೆ ಆನುವಂಶಿಕವಾಗಿ ಬೇಗಂ ಅವರಿಗೆ ಸಲ್ಲಬೇಕು. ಭಾರತ ಸರ್ಕಾರವು ಆಸ್ತಿಯನ್ನು ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತದಲ್ಲದೇ, ಕೆಂಪು ಕೋಟೆಯನ್ನು ಅರ್ಜಿದಾರರಿಗೆ ಹಸ್ತಾಂತರಿಸಬೇಕು ಅಥವಾ ಸಾಕಷ್ಟು ಪರಿಹಾರವನ್ನು ನೀಡಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.