ADVERTISEMENT

'ಕೆಂಪೇಗೌಡ ಪ್ರತಿಮೆ' ಖ್ಯಾತಿಯ ರಾಮ್‌ ಸುತಾರ್‌ಗೆ 'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
ಪಿಟಿಐ
Published 20 ಮಾರ್ಚ್ 2025, 13:23 IST
Last Updated 20 ಮಾರ್ಚ್ 2025, 13:23 IST
ರಾಮ್‌ ಸುತಾರ್‌
ರಾಮ್‌ ಸುತಾರ್‌   

ಮುಂಬೈ: ವಿಶ್ವ ವಿಖ್ಯಾತ ಶಿಲ್ಪಿ ಶತಾಯುಷಿ ರಾಮ್‌ ಸುತಾರ್‌ ಅವರಿಗೆ ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಘೋಷಣೆ ಮಾಡಿದ್ದಾರೆ. ಮಹಾರಾಷ್ಟ್ರ ರಾಜ್ಯದ ಅತ್ಯುನ್ನತ ಪ್ರಶಸ್ತಿ ಇದಾಗಿದೆ.

ರಾಜ್ಯದ ಧೂಲೆ ಜಿಲ್ಲೆಯ ಧೂಲೆ ನಗರದವರು. ಬಾಂಬೆಯ ಜೆ.ಜೆ ಸ್ಕೂಲ್‌ ಆಫ್‌ ಆರ್ಟ್‌ನಿಂದ ಬಂಗಾರ ಪದಕ ಪಡೆದುಕೊಂಡಿರುವ ಇವರ ಶಿಲ್ಪಗಳನ್ನು ಅಧ್ಯಯನ ಮಾಡಲು ದೇಶ–ವಿದೇಶಗಳಿಂದ ಜನರು ಆಗಮಿಸುತ್ತಾರೆ.

ಪ್ರಸಿದ್ಧ ಮೈಕೆಲ್‌ಏಂಜೆಲೊ ಹಾಗೂ ರೋಡಿನ್‌ ಅವರ ಕಲಾತ್ಮಕತೆಯೊಂದಿಗೆ ರಾಮ್‌ ಅವರ ಶಿಲ್ಪ ಕಲೆಯನ್ನು ಹೋಲಿಸಿ ವಿಮರ್ಶಿಸಲಾಗುತ್ತದೆ. 1999ರಲ್ಲಿ ರಾಮ್‌ ಅವರಿಗೆ ಪದ್ಮಶ್ರೀ ಹಾಗೂ 2016ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ಇಷ್ಟೇ ಅಲ್ಲದೇ ದೇಶದ ವಿವಿಧ ಪ್ರತಿಷ್ಠಿತ ಗೌರವಗಳಿಗೂ ರಾಮ್‌ ಪಾತ್ರರಾಗಿದ್ದಾರೆ.

ADVERTISEMENT

ಪ್ರಸಿದ್ಧ ಶಿಲ್ಪಗಳು:

ಸಂಸತ್ತಿನ ಹಳೆಯ ಕಟ್ಟಡದ ಮುಂಭಾಗ ಇರುವ ಮಹಾತ್ಮ ಗಾಂಧಿ ಅವರ ಪ್ರತಿಮೆ, ಇದನ್ನೇ ಹೋಲುವ ಬೆಂಗಳೂರಿನ ವಿಧಾನಸೌಧದ ಮುಂಭಾಗ ಇರುವ ಪ್ರತಿಮೆಯನ್ನು ರಾಮ್‌ ಅವರೇ ಕೆತ್ತಿದ್ದಾರೆ. ಮುಂಬೈನ ಇಂದು ಮಿಲ್ಸ್‌ನಲ್ಲಿರುವ ಅಂಬೇಡ್ಕರ್‌ ಅವರ ಪ್ರತಿಮೆ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರುವ 108 ಅಡಿಯ ಕೆಂಪೇಗೌಡ ಪ್ರತಿಮೆಯನ್ನೂ ಇವರೇ ಕೆತ್ತಿದ್ದಾರೆ.

ಗುಜರಾತ್‌ನಲ್ಲಿರುವ ಜಗತ್ತಿನಲ್ಲೇ ಅತಿ ಎತ್ತರದ ಏಕತೆ ಪ್ರತಿಮೆಯನ್ನೂ (ಸರ್ದಾರ್ ವಲ್ಲಭಬಾಯಿ ಅವರ ಗೌರವಾರ್ಥ ನಿರ್ಮಿಸಿರುವ ಪ್ರತಿಮೆ) ರಾಮ್‌ ಸುತಾರ್‌ ಅವರೇ ಕೆತ್ತಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರತಿಮೆಯನ್ನೂ ವಿನ್ಯಾಸ ಮಾಡುತ್ತಿದ್ದಾರೆ. ಸಂಸತ್ತಿನ ಕಟ್ಟಡ ಮುಂದಿರುವ ಗಾಂಧಿ ಪ್ರತಿಮೆಯು ರಾಮ್‌ ಅವರಿಗೆ ಅತ್ಯಂತ ಕೀರ್ತಿ ತಂದುಕೊಟಿದ್ದು, ಇದೇ ಮಾದರಿಯ ಪ್ರತಿಮೆಯನ್ನು ಸುಮಾರು 450 ದೇಶದಲ್ಲಿ ಸ್ಥಾಪನೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.