ADVERTISEMENT

ಆರ್‌ಬಿಐನ 26ನೇ ಗವರ್ನರ್‌ ಆಗಿ ಅಧಿಕಾರ ಸ್ವೀಕರಿಸಿದ ಸಂಜಯ್ ಮಲ್ಹೋತ್ರಾ

ಪಿಟಿಐ
Published 11 ಡಿಸೆಂಬರ್ 2024, 7:46 IST
Last Updated 11 ಡಿಸೆಂಬರ್ 2024, 7:46 IST
<div class="paragraphs"><p>ಹಿರಿಯ ಅಧಿಕಾರಿಗಳಿಂದ ಸಂಜಯ್ ಮಲ್ಹೋತ್ರಾಗೆ ಸ್ವಾಗತ</p></div>

ಹಿರಿಯ ಅಧಿಕಾರಿಗಳಿಂದ ಸಂಜಯ್ ಮಲ್ಹೋತ್ರಾಗೆ ಸ್ವಾಗತ

   

– ಎಕ್ಸ್ ಚಿತ್ರ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) 26ನೇ ಗವರ್ನರ್‌ ಆಗಿ ಬುಧವಾರ ಸಂಜಯ್ ಮಲ್ಹೋತ್ರಾ ಅವರು ಅಧಿಕಾರ ಸ್ವೀಕರಿಸಿದರು.

ADVERTISEMENT

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ದೇಶದ ಜನರು ಏನನ್ನು ಎದುರು ನೋಡುತ್ತಿದ್ದಾರೆ ಎಂಬ ಸ್ಪಷ್ಟ ಅರಿವಿದೆ. ಅವರ ನಂಬಿಕೆ ಬಗ್ಗೆಯೂ ತಿಳಿದಿದೆ. ಯಾವುದು ಆರ್ಥಿಕ ಬೆಳವಣಿಗೆ, ಯಾವುದು ಸ್ಥಿರ ಹಾಗೂ ನಿಶ್ಚಿತ ನೀತಿ ಎನ್ನುವ ತಿಳಿವಳಿಕೆಯಿದೆ. ಆ ಗುರಿ ಸಾಧನೆಯ ಹಾದಿಯಲ್ಲಿ ಜನರ ಹಿತಾಸಕ್ತಿ ಕಾಪಾಡಲು ಒತ್ತು ನೀಡುತ್ತೇನೆ’ ಎಂದು ಭರವಸೆ ನೀಡಿದರು.

‘ಆರ್ಥಿಕ ಸ್ಥಿರತೆಗೆ ಆರ್‌ಬಿಐ ಒತ್ತು ನೀಡಿದೆ. ಇದಕ್ಕೆ ಸಂಬಂಧಿಸಿದ ನಿಲುವುಗಳನ್ನು ಮುಂದುವರಿಸಲಾಗುವುದು. ಪ್ರಸಕ್ತ ಜಾಗತಿಕ ಆರ್ಥಿಕತೆ ಮತ್ತು ಬಿಕ್ಕಟ್ಟಿನ ಬಗ್ಗೆ ಜಾಗರೂಕವಾಗಿದ್ದೇವೆ. ಬಿಕ್ಕಟ್ಟಿನಿಂದ ಎದುರಾಗುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವ ಸಾಮರ್ಥ್ಯ ಹೊಂದಿದ್ದೇವೆ’ ಎಂದು ಹೇಳಿದರು.

‘ಸೆಬಿ, ಕೇಂದ್ರ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಸೇರಿ ಎಲ್ಲಾ ಹಣಕಾಸು ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಟ್ಟಿಗೆ ನಿರಂತರವಾಗಿ ಸಂವಹನ ನಡೆಸಲಾಗುವುದು. ಆರ್‌ಬಿಐನ ಪರಂಪರೆಯನ್ನು ಮುಂದುವರಿಸುತ್ತೇನೆ’ ಎಂದು ಹೇಳಿದರು.

‘ನಾವು ಎಲ್ಲದರ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿಲ್ಲ. ಹಾಗಾಗಿ, ಎಲ್ಲಾ ವಲಯಗಳ ಪ್ರಮುಖರ ಜೊತೆಗೆ ಸಮಾಲೋಚನೆ ನಡೆಸಲಾಗುವುದು’ ಎಂದರು.

ಈಗಾಗಲೇ, ಆರ್ಥಿಕ ಸೇರ್ಪಡೆಗೆ ಸಂಬಂಧಿಸಿದಂತೆ ಆರ್‌ಬಿಐ ಹಲವು ಕ್ರಮಕೈಗೊಂಡಿದೆ. ಇದನ್ನು ಮುಂದುವರಿಸಲು ವ್ಯಾಪಕವಾಗಿ ತಂತ್ರಜ್ಞಾನದ ನೆರವು ಪಡೆಯಲಾಗುವುದು’ ಎಂದು ತಿಳಿಸಿದರು.

ನೂತನ ಗವರ್ನರ್‌ಗೆ ಸವಾಲುಗಳೇನು?

ಗವರ್ನರ್‌ ಆಗಿದ್ದ ಶಕ್ತಿಕಾಂತ ದಾಸ್ ಅವರ ಪ್ರಕಾರ ದೇಶದ ಆರ್ಥಿಕತೆ ಬೆಳವಣಿಗೆ ಮತ್ತು ಚಿಲ್ಲರೆ ಹಣದುಬ್ಬರದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸವಾಲಾಗಿದೆ. ಇಂತಹ ಸಂಧಿಕಾಲದಲ್ಲಿ ರಾಜಸ್ಥಾನ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿರುವ ಮಲ್ಹೋತ್ರಾ ಅವರು ಆರ್‌ಬಿಐನ ಸಾರಥ್ಯವಹಿಸಿದ್ದಾರೆ. 

ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಎರಡು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 6.21ರಷ್ಟು ದಾಖಲಾಗಿದೆ. ಇದು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಶೇ 6ರ ಗುರಿಗಿಂತಲೂ ಹೆಚ್ಚಿದೆ. ಈ ನಡುವೆಯೇ ದಾಸ್‌ ಅಧ್ಯಕ್ಷತೆಯ ಹಣಕಾಸು ನೀತಿ ಸಮಿತಿ ಸಭೆಯು (ಎಂಪಿಸಿ) ಸತತ 11 ಬಾರಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಅಲ್ಲದೆ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಕನಿಷ್ಠಮಟ್ಟಕ್ಕೆ ಕುಸಿದಿದೆ.

ಇವುಗಳನ್ನು ಸಮರ್ಥವಾಗಿ ನಿಭಾಯಿಸುವ ಸವಾಲು ಮಲ್ಹೋತ್ರಾ ಅವರ ಮುಂದಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ಎಂಪಿಸಿ ಸಭೆಯಲ್ಲಿ ರೆಪೊ ದರ ಕಡಿತಗೊಳಿಸಬಹುದು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಮಲ್ಹೋತ್ರಾ ಅವರ ನೇಮಕವು ಈ ಬಗ್ಗೆ ಮತ್ತಷ್ಟು ಆಶಾಭಾವ ಮೂಡಿಸಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.