ADVERTISEMENT

RG Kar rape–murder: ನ್ಯಾಯಾಲಯದ ತೀರ್ಪು ಸಮಾಧಾನ ತಂದಿಲ್ಲ ಎಂದು ಪೋಷಕರ ಬೇಸರ

ಪಿಟಿಐ
Published 20 ಜನವರಿ 2025, 13:21 IST
Last Updated 20 ಜನವರಿ 2025, 13:21 IST
   

ಕೋಲ್ಕತ್ತ: ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತರಬೇತಿ ನಿರತ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗೆ ಕೋಲ್ಕತ್ತ ನ್ಯಾಯಾಲಯವು ಇಂದು (ಸೋಮವಾರ) ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೆ, ಸಂತ್ರಸ್ತ್ರೆಯ ಪೋಷಕರು, ನ್ಯಾಯಾಲಯದ ಆದೇಶವು ಸಮಾಧಾನ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಪೂರ್ಣ ಮನಸ್ಸಿನಿಂದ ತನಿಖೆ ನಡೆಸಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಹಲವು ದುಷ್ಕರ್ಮಿಗಳನ್ನು ರಕ್ಷಿಸಲಾಗಿದೆ' ಎಂದು ದೂರಿರುವ ಅವರು, ನ್ಯಾಯ ಕೋರಿ ಉನ್ನತ ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿನಿಯ ತಾಯಿ, 'ನಾವು ಆಘಾತಗೊಂಡಿದ್ದೇವೆ' ಎಂದಿದ್ದು, 'ಇದು ಹೇಗೆ ಅಪರೂಪದಲ್ಲಿ ಅಪರೂಪದ ಪ್ರಕರಣವಲ್ಲ' ಎಂದು ಕೇಳಿದ್ದಾರೆ. 'ಕರ್ತವ್ಯದಲ್ಲಿದ್ದ ವೈದ್ಯನೊಬ್ಬ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾನೆ. ತೀರ್ಪಿನಿಂದ ನಿರಾಸೆಯಾಗಿದೆ. ಈ ಕೃತ್ಯದ ಹಿಂದೆ ದೊಡ್ಡ ಪಿತೂರಿ ಇದೆ' ಎಂದು ಹೇಳಿದ್ದಾರೆ.

ADVERTISEMENT

2024ರ ಆಗಸ್ಟ್‌ 9ರಂದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಲಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಕೃತ್ಯ ಖಂಡಿಸಿ ದೇಶದಾದ್ಯಂತ ವಿವಿಧೆಡೆ ಸಂಘಟನೆಗಳು ಪ್ರತಿಭಟನೆಗಳು ನಡೆದಿದ್ದವು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರೋಪಿ ಸಂಜಯ್‌ ರಾಯ್‌ ತಪ್ಪಿತಸ್ಥ ಎಂದು ಶನಿವಾರ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು.

ಇಂದು ಶಿಕ್ಷೆ ಪ್ರಕಟಿಸಿರುವ ನ್ಯಾಯಾಧೀಶ ಅನಿರ್ಬನ್‌ ದಾಸ್‌ ಅವರು, ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ, ₹ 50,000 ದಂಡವನ್ನೂ ಹಾಕಿದ್ದಾರೆ. ಆದೇಶ ಪ್ರಕಟಿಸುವ ವೇಳೆ, ಇದು 'ಅಪರೂಪದಲ್ಲಿ ಅಪರೂಪ' ಪ್ರಕರಣಗಳ ವರ್ಗಕ್ಕೆ ಬರುವುದಿಲ್ಲ. ಹಾಗಾಗಿ, ಮರಣದಂಡನೆ ವಿಧಿಸಲಾಗದು ಎಂದಿದ್ದಾರೆ.

ಸಂತ್ರಸ್ತೆಯ ತಂದೆ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲ ತಪ್ಪಿತಸ್ಥರಿಗೂ ಶಿಕ್ಷೆಯಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ ₹ 17 ಲಕ್ಷ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.