ADVERTISEMENT

ಲಖಿಂಪುರ ಹಿಂಸಾಚಾರ ಖಂಡಿಸಿದ ಆರ್‌ಎಸ್‌ಎಸ್ ನಾಯಕ; ವಿರೋಧ ಪಕ್ಷದ ವಿರುದ್ಧ ಕಿಡಿ

ಪಿಟಿಐ
Published 8 ಅಕ್ಟೋಬರ್ 2021, 4:14 IST
Last Updated 8 ಅಕ್ಟೋಬರ್ 2021, 4:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನಾಲ್ವರು ರೈತರ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರವನ್ನು ಖಂಡಿಸಿರುವ ಆರ್‌ಎಸ್ಎಸ್ ಹಿರಿಯ ಕಾರ್ಯಕಾರಿ ಇಂದ್ರೇಶ್ ಕುಮಾರ್, ವಿರೋಧ ಪಕ್ಷಗಳು ದೇಶದಲ್ಲಿ 'ದ್ವೇಷ ಮತ್ತು ಹಿಂಸೆಯ ವಾತಾವರಣ' ಸೃಷ್ಟಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಲಖಿಂಪುರ–ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ಆಯೋಗವನ್ನು ರಚಿಸಿರುವುದಕ್ಕಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಅವರು ಅಭಿನಂದಿಸಿದರು.

ಇತ್ತೀಚೆಗೆ ಕಾಶ್ಮೀರದಲ್ಲಿ ನಾಗರಿಕರನ್ನು ಹತ್ಯೆ ಮಾಡಿದ ಘಟನೆಗಳನ್ನು ಖಂಡಿಸಿದರು ಮತ್ತು ಘಟನೆಗೆ ಸಂಬಂಧಿಸಿದ ಅಪರಾಧಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.

ADVERTISEMENT

'ಕೆಲವು ವಿರೋಧ ಪಕ್ಷದ ನಾಯಕರು ಮತ್ತು ಪಕ್ಷಗಳು ದೇಶದಲ್ಲಿ ದ್ವೇಷ ಮತ್ತು ಹಿಂಸೆಯ ವಾತಾವರಣವನ್ನು ಸೃಷ್ಟಿಸುತ್ತಿವೆ. ಲಖಿಂಪುರ-ಖೇರಿಯಲ್ಲಿ ನಡೆದ ಘಟನೆ ಖಂಡನೀಯ. ಘಟನೆಯ ತನಿಖೆಗಾಗಿ ಆಯೋಗವನ್ನು ರಚಿಸಿರುವುದಕ್ಕಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಅಭಿನಂದನೆಗಳು. ಇದರಿಂದಾಗಿ ಆಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ' ಎಂದು ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಕಮಿಟಿ ಸದಸ್ಯ ಕುಮಾರ್ ತಿಳಿಸಿದರು.

ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಎರಡು ದಶಕಗಳ ಆಡಳಿತವನ್ನು ಗುರುತಿಸಲು ಇಲ್ಲಿ ಆಯೋಜಿಸಲಾದ ಕಾರ್ಯಕ್ರಮ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

'ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯು ದೇಶವ್ಯಾಪಿ ಚಳುವಳಿಯಾಗಿ ಉಳಿದಿಲ್ಲ ಮತ್ತು ಇದು ಉಗ್ರರ ವಿನ್ಯಾಸ ಮತ್ತು ವಿರೋಧ ಪಕ್ಷಗಳ ರಾಜಕೀಯಕ್ಕೆ ಬಲಿಯಾಗಿದೆ. ರೈತರ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ನಾಯಕರು ದೇಶದ ವಾತಾವರಣವನ್ನು ಹಾಳುಮಾಡುತ್ತಿದ್ದಾರೆ. ರೈತರಿಗಾಗಿ ಕೇಂದ್ರದ ಬಾಗಿಲು ಸದಾ ತೆರೆದಿದೆ. ಹೀಗಾಗಿ ಪ್ರತಿಭಟನಾಕಾರರು ಮುಂದೆ ಬಂದು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು' ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.