ADVERTISEMENT

ಬಿರ್‌ಭೂಮ್‌ ಹಿಂಸಾಚಾರ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಶಾಸಕರ ಹೊಡೆದಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2022, 8:26 IST
Last Updated 28 ಮಾರ್ಚ್ 2022, 8:26 IST
ಚಿತ್ರ ಕೃಪೆ – ಟ್ವೀಟ್‌ ಸ್ಕ್ರೀನ್‌ಗ್ರ್ಯಾಬ್
ಚಿತ್ರ ಕೃಪೆ – ಟ್ವೀಟ್‌ ಸ್ಕ್ರೀನ್‌ಗ್ರ್ಯಾಬ್   

ಕೋಲ್ಕತ್ತ:ಬಿರ್‌ಭೂಮ್‌ನಲ್ಲಿನ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಶಾಸಕರು ಹೊಡೆದಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷದ ಶಾಸಕರು ಆಗ್ರಹಿಸಿದರು. ಆಡಳಿತ ಪಕ್ಷದ ಶಾಸಕರು ಹಾಗೂ ಪ್ರತಿಪಕ್ಷಗಳ ಶಾಸಕರ ನಡುವಣ ವಾಕ್ಸಮರ ತಾರಕಕ್ಕೇರಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಬಿರ್‌ಭೂಮ್ ಜಿಲ್ಲೆಯ ರಾಮ್‌ಪುರಹಾಟ್‌ ಘಟನೆ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದ ಬಿಜೆಪಿ ಶಾಸಕರ ಮೇಲೆ ಟಿಎಂಸಿ ಶಾಸಕರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಆರೋಪಿಸಿದ್ದು, ಹೊಡೆದಾಟದ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಘಟನೆ ಬಳಿಕ ಸುವೇಂದು ಅಧಿಕಾರಿ ಸೇರಿದಂತೆ ಐವರು ಬಿಜೆಪಿ ಶಾಸಕರನ್ನು ಮುಂದಿನ ಆದೇಶದ ವರೆಗೆ ಅಮಾನತುಗೊಳಿಸಲಾಗಿದೆ.

ಮಾರ್ಚ್‌ 22ರ ಮಂಗಳವಾರ ಬಿರ್‌ಭೂಮ್ ಜಿಲ್ಲೆಯ ರಾಮ್‌ಪುರಹಾಟ್‌ನ ಟಿಎಂಸಿ ಪಂಚಾಯಿತಿ ಸದಸ್ಯನ ಹತ್ಯೆ ನಡೆದಿತ್ತು. ಅದರ ಬೆನ್ನಲ್ಲೇ ಪಕ್ಕದ ಬೋಗ್‌ತುಇ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಕೃತ್ಯದಲ್ಲಿ 8 ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.