
ಮಲ್ಲಿಕಾರ್ಜುನ ಖರ್ಗೆ
(ಪಿಟಿಐ ಚಿತ್ರ)
ನವದೆಹಲಿ: 'ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ದಾಖಲೆ ಮಟ್ಟಕ್ಕೆ ಕುಸಿದಿರುವುದು ದೇಶದ ನಿಜವಾದ ಆರ್ಥಿಕ ಪರಿಸ್ಥಿತಿಯನ್ನು ತೋರಿಸುತ್ತದೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು (ಗುರುವಾರ) ಹೇಳಿದ್ದಾರೆ.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಬುಧವಾರ ₹90.15ಕ್ಕೆ ಕುಸಿದಿತ್ತು. ಗುರುವಾರದ ಆರಂಭಿಕ ವಹಿವಾಟಿನಲ್ಲೂ ಅಮೆರಿಕದ ಡಾಲರ್ ಎದುರು ರೂಪಾಮಿ ಮೌಲ್ಯ ಮತ್ತಷ್ಟು 28 ಪೈಸೆ ಕುಸಿತ ಕಂಡು ಸಾರ್ವಕಾಲಿಕ ಕನಿಷ್ಠ ಮೊತ್ತವಾದ ₹90.43ಕ್ಕೆ ತಲುಪಿದೆ.
ಈ ಸಂಬಂಧ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ರೂಪಾಯಿ ಮೌಲ್ಯ ಕುಸಿತ ಕಂಡಿದ್ದಾಗ ಸ್ವತಃ ಮೋದಿ ಅವರೇ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಎಂದು ಖರ್ಗೆ ನೆನಪಿಸಿಕೊಂಡಿದ್ದಾರೆ.
'ರೂಪಾಯಿ ಮೌಲ್ಯ ದಾಖಲೆ ಕುಸಿತ ಕಂಡಿದೆ. ಇದು ದೇಶದ ನಿಜವಾದ ಆರ್ಥಿಕ ಸ್ಥಿತಿಯನ್ನು ತೋರಿಸುತ್ತದೆ. ಒಂದು ವೇಳೆ ಮೋದಿ ಸರ್ಕಾರದ ನೀತಿಗಳು ಸರಿಯಾಗಿದ್ದರೆ ರೂಪಾಯಿ ಇಷ್ಟೊಂದು ಕುಸಿಯುತ್ತಿರಲಿಲ್ಲ' ಎಂದು ಖರ್ಗೆ ಹೇಳಿದ್ದಾರೆ.
'2014ರಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿದೆ. ನೀವು ಇದಕ್ಕೆ ಉತ್ತರಿಸಲೇಬೇಕು ಎಂದು ಸರ್ಕಾರವನ್ನು ಮೋದಿ ಪ್ರಶ್ನಿಸಿದ್ದರು. ನಾವು ಈಗ ಅದೇ ಪ್ರಶ್ನೆಯನ್ನು ಪ್ರಧಾನಿ ಅವರನ್ನು ಕೇಳುತ್ತಿದ್ದೇವೆ' ಎಂದು ಹೇಳಿದ್ದಾರೆ.
'ದೇಶವು ಅಭಿವೃದ್ಧಿ ಸಾಧಿಸುತ್ತಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇದೆ ಎಂದು ಸರ್ಕಾರವು ಹೇಳಿಕೊಳ್ಳುತ್ತಿದೆ. ಆದರೆ ರೂಪಾಯಿ ಮೌಲ್ಯ ಕುಸಿದಾಗ ದೇಶದ ನಿಜವಾದ ಆರ್ಥಿಕ ಸ್ಥಿತಿ ಬಯಲಾಗುತ್ತಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.