ಲಖನೌ(ಉತ್ತರ ಪ್ರದೇಶ): ಅಹಮದಾಬಾದ್ ವಿಮಾನ ದುರಂತದ ಬೆನ್ನಲ್ಲೇ ವಿಮಾನಗಳು ತಾಂತ್ರಿಕ ದೋಷ ಎದುರಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಭಾನುವಾರ ಮುಂಜಾನೆ ಲಖನೌದಲ್ಲಿ ಇಳಿದ ಸೌದಿ ಏರ್‌ಲೈನ್ಸ್ ವಿಮಾನದಲ್ಲಿಯೂ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡಿದೆ.
250 ಹಜ್ ಯಾತ್ರಿಕರನ್ನು ಹೊತ್ತ ಸೌದಿ ಏರ್‌ಲೈನ್ಸ್ ವಿಮಾನವು(ಎಸ್‌ವಿ 3112) ಶನಿವಾರ ರಾತ್ರಿ 10.30ಕ್ಕೆ ಜೆಡ್ಡಾದಿಂದ ಹೊರಟು ಭಾನುವಾರ ಮುಂಜಾನೆ ಸುಮಾರು 6.30ರ ವೇಳೆ ಲಖನೌನ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿದೆ. ಲ್ಯಾಂಡಿಂಗ್ ಆದ ಸ್ವಲ್ಪ ಸಮಯದ ನಂತರ ವಿಮಾನದ ಎಡ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ತಕ್ಷಣ ಎಚ್ಚೆತ್ತ ಪೈಲಟ್ ವಿಮಾನವನ್ನು ನಿಲ್ಲಿಸಿ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದಾರೆ. ನಂತರ ವಿಮಾನವನ್ನು ರನ್‌ವೇಯಿಂದ ಟ್ಯಾಕ್ಸಿವೇಗೆ ಸ್ಥಳಾಂತರಿಸಲಾಯಿತು. ಅಲ್ಲಿ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಸಲಾಯಿತು ಎಂದು ಹೇಳಿದ್ದಾರೆ.
ಸ್ಥಳಕ್ಕೆ ಧಾವಿಸಿದ ವಿಮಾನದ ನಿಲ್ದಾಣದ ತುರ್ತು ಪ್ರತಿಕ್ರಿಯೆ ತಂಡವು ಚಕ್ರಕ್ಕೆ ನೀರು ಹಾಯಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ. ಹೈಡ್ರಾಲಿಕ್ ಸೋರಿಕೆಯಿಂದ ಹೊಗೆ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ಟೇಕಾಫ್ ಆಗುವ ಸಮಯದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದರೆ, ವಿಮಾನ ಸ್ಫೋಟಗೊಳ್ಳುವ ಸಾಧ್ಯತೆಯಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಸ್ಪಲ್ಪ ಕ್ಷಣದಲ್ಲೇ ಪತನಗೊಂಡಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಸೇರಿದಂತೆ ಸುಮಾರು 265ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಇಂದು(ಸೋಮವಾರ) ಹಾಂಗ್‌ಕಾಂಗ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಮರಳಿ ಹಾಂಗ್‌ಕಾಂಗ್‌ನಲ್ಲಿಯೇ ಲ್ಯಾಂಡಿಂಗ್ ಮಾಡಿದೆ. ಬಾಂಬ್ ಬೆದರಿಕೆ ಹಿನ್ನೆಲೆ ಫ್ರಾಂಕ್‌ಫರ್ಟ್‌ನಿಂದ ಹೈದರಾಬಾದ್ ಕಡೆ ಹೊರಟಿದ್ದ ಲುಫ್ತಾನ್ಸ ಏರ್‌ಲೈನ್ಸ್‌ನ ಡ್ರೀಮ್‌ಲೈನರ್ ವಿಮಾನವೂ ಮರಳಿ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿಯೇ ಲ್ಯಾಂಡಿಂಗ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.