ADVERTISEMENT

ಸಾತ್ಯಕಿ ಸಾವರ್ಕರ್ ತಾಯಿಯ ವಂಶವೃಕ್ಷ ಮಾಹಿತಿ ಕೋರಿದ್ದ ರಾಹುಲ್ ಗಾಂಧಿ ಅರ್ಜಿ ವಜಾ

ಪಿಟಿಐ
Published 31 ಮೇ 2025, 10:51 IST
Last Updated 31 ಮೇ 2025, 10:51 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ನವದೆಹಲಿ: ಹಿಂದುತ್ವ ಪ್ರತಿಪಾದಕ ವಿ.ಡಿ. ಸಾವರ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರ ತಾಯಿಯ ವಂಶವೃಕ್ಷದ ವಿವರಗಳನ್ನು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.

ADVERTISEMENT

ಈ ಪ್ರಕರಣವು ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಮಾಡಿದ್ದ ಮಾನನಷ್ಟ ಭಾಷಣಕ್ಕೆ ಸಂಬಂಧಿಸಿದ್ದಾಗಿದೆಯೇ ಹೊರತು ಸಾತ್ಯಕಿ ಸಾವರ್ಕರ್ ಅವರ ತಾಯಿ ದಿ. ಹಿಮಾನಿ ಅಶೋಕ್ ಸಾವರ್ಕರ್ ಅವರ ವಂಶವೃಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿರುವ ನ್ಯಾಯಮೂರ್ತಿ ಅಮೋಲ್ ಶಿಂದೆ ಅವರು, ರಾಹುಲ್ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಹಿಮಾನಿ ಸಾವರ್ಕರ್ ಅವರು ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ್ದ ಹಂತಕ ನಾಥೂರಾಮ್ ಗೋಡ್ಸೆಯ ಕಿರಿಯ ಸಹೋದರ ಗೋಪಾಲ್ ವಿನಾಯಕ್ ಗೋಡ್ಸೆ ಅವರ ಮಗಳು.

ದೂರುದಾರರು (ಸಾತ್ಯಕಿ ಸಾವರ್ಕರ್) ದೂರು ಸಲ್ಲಿಸುವಾಗ ತಮ್ಮ ತಂದೆಯ ಪೂರ್ವಜರ ವಿವರಗಳನ್ನು ನೀಡಿದ್ದರೂ, ಅವರ ತಾಯಿಯ ಪೂರ್ವಜರ ವಿವರವನ್ನು ಬಹಿರಂಗಪಡಿಸಲಾಗಿಲ್ಲ ಎಂದು ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ಅವರು ವಾದಿಸಿದ್ದಾರೆ. ಅರ್ಜಿ ವಿಚಾರಣೆಗೆ ಈ ಮಾಹಿತಿ ನಿರ್ಣಾಯಕವಾಗುತ್ತದೆ ಎಂದೂ ತಿಳಿಸಿದ್ದರು.

ಈ ಪ್ರಕರಣವು ಹಿಮಾನಿ ಸಾವರ್ಕರ್ ಅವರ ವಂಶವೃಕ್ಷಕ್ಕೆ ಸಂಬಂಧಿಸಿಲ್ಲ ಅಥವಾ ವಿವಾದಾತ್ಮಕವಾಗಿಲ್ಲ. ಆದ್ದರಿಂದ ಹೆಚ್ಚಿನ ತನಿಖೆ ಅಗತ್ಯವಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಇದೇ ಪ್ರಕರಣ ಸಂಬಂಧ ನ್ಯಾಯಾಲಯವು ಈಗಾಗಲೇ ರಾಹುಲ್ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡಿದೆ.

ಏನಿದು ಪ್ರಕರಣ?

ರಾಹುಲ್‌ ಗಾಂಧಿ ಅವರು 2023ರ ಮಾರ್ಚ್‌ನಲ್ಲಿ ಲಂಡನ್‌ನಲ್ಲಿ ಮಾಡಿದ ಭಾಷಣದಲ್ಲಿ, ವಿ.ಡಿ. ಸಾವರ್ಕರ್ ಅವರು ತಮ್ಮ ಐದಾರು ಸ್ನೇಹಿತರೊಂದಿಗೆ ಸೇರಿಕೊಂಡು ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಖುಷಿಪಟ್ಟಿದ್ದಾಗಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆಂದು ಹೇಳಿದ್ದಾರೆ. ಆದರೆ, ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ವಿ.ಡಿ. ಸಾವರ್ಕರ್ ಅವರು ಎಲ್ಲಿಯೂ ಆ ರೀತಿ ಬರೆದಿಲ್ಲ. ರಾಹುಲ್‌ ಗಾಂಧಿಯವರ ಈ ಆರೋಪ ದುರುದ್ದೇಶಪೂರಿತವಾಗಿದೆ ಎಂದು ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ರಾಹುಲ್‌ ಗಾಂಧಿ ವಿರುದ್ಧ ಪುಣೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.