ADVERTISEMENT

ತಬ್ಲಿಗ್‌ ಪ್ರಕರಣದಲ್ಲಿ ಕೇಂದ್ರದ ಪ್ರಮಾಣಪತ್ರ ತೃಪ್ತಿಕರವಾಗಿಲ್ಲ: ಸುಪ್ರೀಂ

ಪಿಟಿಐ
Published 17 ನವೆಂಬರ್ 2020, 9:46 IST
Last Updated 17 ನವೆಂಬರ್ 2020, 9:46 IST
ಸುಪ್ರೀಂಕೋರ್ಟ್‌ 
ಸುಪ್ರೀಂಕೋರ್ಟ್‌    

ನವದೆಹಲಿ: ತಬ್ಲಿಗ್‌ ಜಮಾತ್‌ ಸಭೆಯಿಂದಾಗಿಯೇ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಲ್ಲಿಸಿರುವ ಪ್ರಮಾಣ ಪತ್ರ ತೃಪ್ತಿಕರವಾಗಿಲ್ಲ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.

‘ನೀವು ಸೂಕ್ತ ಪ್ರಮಾಣಪತ್ರವನ್ನೇ ಸಲ್ಲಿಸಿಲ್ಲ. ನೀವು ಸಲ್ಲಿರುವ ಪ್ರಮಾಣಪತ್ರದಲ್ಲಿ ಪ್ರಮುಖ ಎರಡು ಪ್ರಶ್ನೆಗಳಿಗೆ ಉತ್ತರವೇ ಇಲ್ಲ. ಈ ನಡೆ ಒಪ್ಪತಕ್ಕದ್ದಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ವಿ.ರಾಮಸುಬ್ರಮಣ್ಯಂ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠವು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಹೇಳಿತು.

‘ಮೆಹ್ತಾ, ನಿಮ್ಮ ಉತ್ತರವು ತೃಪ್ತಿದಾಯಕವಾಗಿಲ್ಲ. ಟಿ.ವಿ.ಯಲ್ಲಿ ಪ್ರಸಾರವಾಗುವ ಇಂತಹ ಸುದ್ದಿಗಳಿಗೆ (ಕೋಮು ದ್ವೇಷ ಹರಡುವ) ಕಡಿವಾಣ ಹಾಕಲು ಇರುವ ಮಾರ್ಗೋಪಾಯಗಳ ಕುರಿತ ಮಾಹಿತಿಯನ್ನು ನಿಮ್ಮಿಂದ ಬಯಸಿದ್ದೆವು. ಇಂತಹ ಸುದ್ದಿಗಳಿಗೆ ಕಡಿವಾಣ ಹಾಕಲು ಈಗ ಯಾವುದೇ ಕಾರ್ಯವಿಧಾನಗಳು ಇಲ್ಲದಿದ್ದ ಪಕ್ಷದಲ್ಲಿ ಹೊಸ ಕಾರ್ಯವಿಧಾನವೊಂದನ್ನು ಜಾರಿಗೆ ತನ್ನಿ’ ಎಂದು ಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಪ್ರಕರಣದ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.

ADVERTISEMENT

‘ತಬ್ಲಿಗ್ ಜಮಾತ್‌ ಸಭೆಯಿಂದಾಗಿಯೇ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಕೆಲ ಮಾಧ್ಯಮಗಳು ಬಿಂಬಿಸುತ್ತಿವೆ. ಆ ಮೂಲಕ ಕೋಮು ದ್ವೇಷ ಹರಡುತ್ತಿವೆ’ ಎಂದು ಆರೋಪಿಸಿ ಜಮೀಯತ್‌ ಉಲಮಾ–ಐ–ಹಿಂದ್‌ ಹಾಗೂ ಇತರ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.