ADVERTISEMENT

ತುಷಾರ್ ಗಾಂಧಿ ಅರ್ಜಿ ಮರುಪರಿಶೀಲನೆಗೆ ‘ಸುಪ್ರೀಂ’ ಸೂಚನೆ

ಸಬರಮತಿ ಆಶ್ರಮ ಪುನರಾಭಿವೃದ್ಧಿ ಪ್ರಶ್ನಿಸಿ ಗುಜರಾತ್ ಹೈಕೋರ್ಟ್ ಅರ್ಜಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 15:28 IST
Last Updated 1 ಏಪ್ರಿಲ್ 2022, 15:28 IST
ಗುಜರಾತಿನಲ್ಲಿನ ಸಬರಮತಿ ಆಶ್ರಮ –ಪ್ರಜಾವಾಣಿ ಚಿತ್ರ
ಗುಜರಾತಿನಲ್ಲಿನ ಸಬರಮತಿ ಆಶ್ರಮ –ಪ್ರಜಾವಾಣಿ ಚಿತ್ರ   

ನವದೆಹಲಿ: ಅಹಮದಾಬಾದ್‌ನಲ್ಲಿ ಸಾಬರಮತಿ ಆಶ್ರಮ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸುವ ಗುಜರಾತ್‌ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್‌ ಗಾಂಧಿ ಅವರು ಸಲ್ಲಿಸಿದ ಅರ್ಜಿಯನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ ಶುಕ್ರವಾರ ಗುಜರಾತ್ ಹೈಕೋರ್ಟ್‌ಗೆ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು, ಗುಜರಾತ್ ಸರ್ಕಾರದಿಂದ ಸಮಗ್ರ ಅಫಿಡವಿಟ್‌ನ ವಿವರ ಕೇಳದೆಯೇ ಅಲ್ಲಿನ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ಆದರೆ, ಅರ್ಹತೆಯ ಆಧಾರದಲ್ಲಿ ಅರ್ಜಿಯನ್ನು ಮರುಪರಿಶೀಲಿಸಬೇಕು ಹಾಗೂ ಅರ್ಜಿದಾರರಿಗೆ ಯೋಜನೆಯ ಸಮಗ್ರ ಮಾಹಿತಿ ನೀಡಬೇಕು ಎಂದು ಸೂಚಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಮತ್ತು ಗುಜರಾತ್ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಿಷಯವನ್ನು ಹೈಕೋರ್ಟ್‌ಗೆ ಹಿಂತಿರುಗಿಸಬಹುದು ಎಂದು ಒಪ್ಪಿಕೊಂಡರು.‌

ADVERTISEMENT

‘ಈ ಯೋಜನೆಯು ಸಾಬರಮತಿ ಆಶ್ರಮದ ಭೌತಿಕ ರಚನೆಯನ್ನು ಬದಲಾಯಿಸುತ್ತದೆ ಮತ್ತು ಗಾಂಧೀಜಿಯವರ ಸಿದ್ಧಾಂತಕ್ಕೆ ಧಕ್ಕೆ ತರುವ ಆತಂಕವಿದೆ. ಯೋಜನೆಯ ಅನುಷ್ಠಾನದಿಂದ ಆಶ್ರಮ ಗಾಂಧಿ ತತ್ವವನ್ನು ಕಳೆದುಕೊಳ್ಳುವಂತಾಗಲಿದೆ’ ಎಂದು ಅರ್ಜಿದಾರ ತುಷಾರ್ ಗಾಂಧಿ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

‘1933ರ ಸೆ.30ರಂದು ಗಾಂಧೀಜಿಯವರು ಲಿಖಿತವಾಗಿರುವ ನೀಡಿರುವ ಸೂಚನೆಯ ಪ್ರಕಾರ, ಆಶ್ರಮವನ್ನು ವಿಶ್ವದರ್ಜೆಯ ವಸ್ತುಸಂಗ್ರಹಾಲಯ ಮತ್ತು ಪ್ರವಾಸಿ ತಾಣ ಮಾಡಲು ಮರುವಿನ್ಯಾಸ ಗೊಳಿಸುವ ಮತ್ತು ಮರುಅಭಿವೃದ್ಧಿ ಮಾಡುವ ನಿರ್ಧಾರವು ಮಹಾತ್ಮ ಗಾಂಧೀಜಿಯವರ ಇಚ್ಛೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ’ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.