ADVERTISEMENT

ದೆಹಲಿ | ಮಹಿಳೆಯರಿಗೆ ಮಾಸಿಕ ₹1000: ಯೋಜನೆಗೆ ಕೇಜ್ರಿವಾಲ್ ಚಾಲನೆ

ಪಿಟಿಐ
Published 12 ಡಿಸೆಂಬರ್ 2024, 9:08 IST
Last Updated 12 ಡಿಸೆಂಬರ್ 2024, 9:08 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

(ಪಿಟಿಐ ಚಿತ್ರ)

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರಿಗೆ ಮಾಸಿಕ ₹1000 ಆರ್ಥಿಕ ನೆರವು ನೀಡುವ 'ಮುಖ್ಯಮಂತ್ರಿ ಮಹಿಳಾ ಸಮ್ಮಾನ ಯೋಜನೆ'ಗೆ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಇಂದು (ಗುರುವಾರ) ಚಾಲನೆ ನೀಡಿದ್ದಾರೆ.

ADVERTISEMENT

ದೆಹಲಿ ವಿಧಾನಸಭೆ ಚುನಾವಣೆಯ ಬಳಿಕ ಎಎಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಆರ್ಥಿಕ ನೆರವಿನ ಮೊತ್ತವನ್ನು ₹2,100ಕ್ಕೆ ಹೆಚ್ಚಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಆದಾಗ್ಯೂ, ದೆಹಲಿಯಲ್ಲಿ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗಿ ಮಾದರಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಮತದಾನದ ಬಳಿಕವಷ್ಟೇ ಫಲಾನುಭುವಿಗಳ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾಸನಭೆಗೆ 2025ರ ಫೆಬ್ರುವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈಗ ಚುನಾವಣಾ ಹೊಸ್ತಿಲಲ್ಲಿರುವಂತೆಯೇ ಆಡಳಿರೂಢ ಎಎಪಿ ಸತತ ಮೂರನೇ ಬಾರಿ ಅಧಿಕಾರಕ್ಕೇರುವ ಗುರಿ ಹೊಂದಿದೆ.

ಈ ಯೋಜನೆಗೆ ಮುಖ್ಯಮಂತ್ರಿ ಅತಿಶಿ ಅಧ್ಯಕ್ಷತೆಯಲ್ಲಿ ದೆಹಲಿ ಸಂಪುಟ ಸಭೆ ಅನುಮೋದನೆ ನೀಡಿದ್ದು, ಶುಕ್ರವಾರದಿಂದಲೇ ಮಹಿಳೆಯರು ನೋಂದಣಿಯನ್ನು ಪ್ರಾರಂಭಿಸಬಹುದು ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

2024-25ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿತ್ತು. ಇದಕ್ಕಾಗಿ ಬಜೆಟ್‌ನಲ್ಲಿ ₹2,000 ಕೋಟಿ ಹಂಚಿಕೆ ಮಾಡಲಾಗಿತ್ತು.

ಯೋಜನೆ ಕುರಿತು ಬಿಜೆಪಿ ಟೀಕೆಯ ಕುರಿತು ಪ್ರತಿಕ್ರಿಯಿಸಿರುವ ಕೇಜ್ರಿವಾಲ್, 'ಮಹಿಳೆಯರನ್ನು ಸಬಲೀಕರಣಗೊಳಿಸಲು, ಸಮಾಜವನ್ನು ಬಲಪಡಿಸಲು ನೆರವಾಗಲಿದೆ. ಹಣ ಎಲ್ಲಿಂದ ಬರಲಿದೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಆದರೆ ನಾವು ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದೆವು. ಅದನ್ನು ಕಾರ್ತಗತಗೊಳಿಸಿದ್ದೇವೆ' ಎಂದು ತಿಳಿಸಿದ್ದಾರೆ.

'ನಾನೊಬ್ಬ ಜಾದೂಗಾರ, ಅಕೌಂಟ್ಸ್‌ನ ಜಾದೂಗಾರ' ಎಂದು ಬಿಜೆಪಿಗೆ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಎಎಪಿ ಸರ್ಕಾರ ಮತ್ತೆ ಅಧಿಕಾರಕ್ಕೇರುವ ವಿಶ್ವಾಸವನ್ನು ಕೇಜ್ರಿವಾಲ್ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮಹಿಳೆಯರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎಲ್ಲ ಮಹಿಳೆಯರು ಒಗ್ಗಟ್ಟಾಗಿ ಕೆಲಸ ಮಾಡಿದರೆ 60ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.