ಸಾಂದರ್ಭಿಕ ಚಿತ್ರ
ಮುಂಬೈ: ಎರಡು ದಿನಗಳ ಹಿಂದೆ ಮುಂಬೈ ಕರಾವಳಿಯಲ್ಲಿ ಸಂಭವಿಸಿದ್ದ ದೋಣಿಗಳ ಡಿಕ್ಕಿ ಅವಘಡದಲ್ಲಿ ನಾಪತ್ತೆಯಾಗಿರುವ ಏಳು ವರ್ಷದ ಬಾಲಕ ಈವರೆಗೆ ಪತ್ತೆಯಾಗಿಲ್ಲ. ಬಾಲಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಧಿಕಾರಿ, ‘ಬಾಲಕನ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಇನ್ನೂ ಕನಿಷ್ಠ 72 ಗಂಟೆಗಳ ಕಾಲ ಕಾರ್ಯಾಚರಣೆ ಮುಂದುವರಿಯಲಿದೆ. ಕಾರ್ಯಾಚರಣೆಯ ಭಾಗವಾಗಿ ನಾಪತ್ತೆಯಾಗಿರುವ ಬಾಲಕನನ್ನು ಹುಡುಕಲು ನೌಕಾಪಡೆಯ ಹೆಲಿಕಾಪ್ಟರ್ ಹಾಗೂ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ನ ದೋಣಿಗಳನ್ನು ನಿಯೋಜಿಸಲಾಗಿದೆ’ ಎಂದು ಹೇಳಿದ್ದಾರೆ.
ಅವಘಡದಲ್ಲಿ ನಾಪತ್ತೆಯಾಗಿದ್ದ 43 ವರ್ಷದ ವ್ಯಕ್ತಿಯ ಮೃತದೇಹ ಗುರುವಾರ ಸಂಜೆ ಪತ್ತೆಯಾಗಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ.
‘ಪ್ರವಾಸಿಗರ ದೋಣಿಯಲ್ಲಿ ಒಟ್ಟು 113 ಮಂದಿ ಇದ್ದರು. ಇವರಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ ಇಬ್ಬರು ಸೇರಿ ಒಟ್ಟು 98 ಮಂದಿಯನ್ನು ರಕ್ಷಣೆ ಮಾಡಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.