ADVERTISEMENT

ದಶಕದಿಂದ ಜಡಗೊಂಡ ಭಾರತಕ್ಕೆ ತುರ್ತಾಗಿ ಬೇಕಿದೆ 2ನೇ ಆರ್ಥಿಕ ಸುಧಾರಣೆ: ಖರ್ಗೆ

ಪಿಟಿಐ
Published 24 ಜುಲೈ 2025, 6:07 IST
Last Updated 24 ಜುಲೈ 2025, 6:07 IST
   

ನವದೆಹಲಿ: ‘ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಡಗೊಂಡಿದ್ದು, ಇದಕ್ಕೆ 1991ರಲ್ಲಿ ನಡೆದ ಐತಿಹಾಸಿಕ ಉದಾರವಾದಿ ಬಜೆಟ್‌ನಂತೆಯೇ 2ನೇ ತಲೆಮಾರಿನ ಆರ್ಥಿಕ ಸುಧಾರಣೆ ಅಗತ್ಯವಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಡಾ. ಮನಮೋಹನ್ ಸಿಂಗ್ ಅವರು ಮಂಡಿಸಿದ ಆರ್ಥಿಕ ಉದಾರೀಕರಣ ಬಜೆಟ್‌ನ 34ನೇ ವರ್ಷಾಚರಣೆಯ ನೆನಪಿನಲ್ಲಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ.

‘ಮೋದಿ ಸರ್ಕಾರ ವಿನಾಶಕಾರಿ ಆರ್ಥಿಕ ನೀತಿಗಳಿಂದಾಗಿ ದೂರದೃಷ್ಟಿ ಮತ್ತು ಕ್ರಿಯೆ ಎರಡನ್ನೂ ಕಳೆದುಕೊಂಡಿದೆ. ಇದರಿಂದ ದೇಶದ ಬೆಳವಣಿಗೆ ದರವೇ ಪಾತಾಳಕ್ಕೆ ಕುಸಿಯುತ್ತಿದೆ. ಸಮಾಜದಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚಾಗುತ್ತಿದೆ. ವೇತನ ಹೆಚ್ಚಾಗದ ಕಾರಣ ಜನರು, ನೌಕರ ವರ್ಗ ತತ್ತರಿಸಿದೆ. ಕಾರ್ಪೊರೇಟ್ ಕುಳಗಳಿಗೆ ಸಹಾಯ ಮಾಡಲು ಮಧ್ಯಮ ವರ್ಗ ಹಾಗೂ ಬಡವರನ್ನು ಸುಲಿಗೆ ಮಾಡಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳು ಕೃಷಿ ಮತ್ತು ತಯಾರಿಕಾ ಘಟಕದಲ್ಲೂ ತಲೆದೋರಿವೆ’ ಎಂದು ಖರ್ಗೆ ಹೇಳಿದ್ದಾರೆ.

ADVERTISEMENT

‘1991ರ ಬಜೆಟ್‌ ಭಾರತದ ಪಾಲಿಗೆ ಪ್ರಮುಖ ಕ್ಷಣವಾಗಿತ್ತು. ದೇಶದಲ್ಲಿ ವ್ಯಾಪಕ ಬದಲಾವಣೆ, ಜನರ ಜೀವನ ಮಟ್ಟದಲ್ಲಿ ಸುಧಾರಣೆ ನಡೆಯಿತು. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಮಾರ್ಗದರ್ಶನದಲ್ಲಿ ಅಂದಿನ ವಿತ್ತ ಸಚಿವ ಮನಮೋಹನ ಸಿಂಗ್ ಅವರು ಆರ್ಥಿಕ ಸುಧಾರಣೆಗೆ ಸರಣಿ ನೀತಿಗಳನ್ನು ಜಾರಿಗೆ ತಂದ ಪರಿಣಾಮ ದೇಶದಲ್ಲಿ ಪರಿವರ್ತನೆ ಆರಂಭವಾಯಿತು. ಮುಂದಿನ ಪೀಳಿಗೆಯ ಮಧ್ಯಮ ವರ್ಗದ ಪರಿವರ್ತನೆಗೆ ಅದು ಸಹಕಾರಿಯಾಯಿತು’ ಎಂದಿದ್ದಾರೆ.

‘ತನ್ನ ಆರ್ಥಿಕ ಸುಧಾರಣಾ ನೀತಿಯ ಕುರಿತು ಕಾಂಗ್ರೆಸ್ ಪಕ್ಷವು ಸದಾ ಹೆಮ್ಮೆ ಪಡುತ್ತದೆ. ಭಾರತದ ಆರ್ಥಿಕತೆಯನ್ನು ಗಣನೀಯವಾಗಿ ಉತ್ತೇಜಿಸಿದ ಮತ್ತು ದೇಶದ ಕೋಟಿಗಟ್ಟಲೆ ಜನರನ್ನು ಬಡತನದಿಂದ ಹೊರತಂದ ಸಾರ್ಥಕತೆ ಪಕ್ಷದ್ದು’ ಎಂದಿದ್ದಾರೆ.

‘ಇಂದು ದೇಶವು ಅಂಥದ್ದೇ ಒಂದು ಅದ್ಭುತ 2ನೇ ತಲೆಮಾರಿನ ಆರ್ಥಿಕ ಸುಧಾರಣೆಯ ತುರ್ತು ಅಗತ್ಯದಲ್ಲಿದೆ. ಮಧ್ಯಮ ವರ್ಗ ಮತ್ತು ಅವಕಾಶ ವಂಚಿತರಿಗೆ ನೆರವಾಗಲು ಈಗ 2ನೇ ಸುಧಾರಣಾ ನೀತಿಯ ಅಗತ್ಯವಿದೆ. ಹೀಗಿದ್ದರೂ ಕಳೆದ 11 ವರ್ಷಗಳಿಂದ ಸರ್ಕಾರ ಜಡಗೊಂಡಿದೆ’ ಎಂದು ಖರ್ಗೆ ಹೇಳಿದ್ದಾರೆ.

ದೇಶದ ಹಣಕಾಸು ನೀತಿಗಳನ್ನು ರೂಪಿಸುವಲ್ಲಿ, ಬೆಲೆ ಏರಿಕೆ ನಿಯಂತ್ರಿಸುವಲ್ಲಿ, ಖಾಸಗಿ ಹೂಡಿಕೆಗಳನ್ನು ತಗ್ಗಿಸುವಲ್ಲಿ ಮತ್ತು ನೌಕರ ವರ್ಗದ ವೇತನ ಹೆಚ್ಚಿಸುವಲ್ಲಿ ಮತ್ತು ಸಾಮಾನ್ಯ ಜನರ ಕಷ್ಟ ನಿವಾರಣೆಯಲ್ಲಿ ಮೋದಿ ಸರ್ಕಾರ ಸದಾ ವಿಫಲವಾಗಿದೆ ಎಂದು ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.