ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ರಾಷ್ಟ್ರ ರಾಜಧಾನಿಯಲ್ಲಿರುವ ಕೆಂಪುಕೋಟೆ ಬಳಿ ಸತತ 12ನೇ ಸಲ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಿ, ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪಿಎಂ, ದಿವಂಗತ ಇಂದಿರಾ ಗಾಂಧಿ ಅವರ ದಾಖಲೆಯನ್ನು ಮುರಿದಿದ್ದಾರೆ.
ಇದರೊಂದಿಗೆ, ಸತತವಾಗಿ ಹೆಚ್ಚು ಸಲ ಸ್ವಾತಂತ್ರ್ಯೋತ್ಸವದಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿಗಳ ಸಾಲಿನಲ್ಲಿ ಜವಾಹರಲಾಲ್ ನೆಹರೂ ನಂತರದ ಸ್ಥಾನಕ್ಕೆ ಏರಿದ್ದಾರೆ.
ಇಂದಿರಾ ಅವರು, 1966ರ ಜನವರಿಯಿಂದ 1977ರ ಮಾರ್ಚ್ ವರೆಗೆ ಹಾಗೂ 1980ರ ಜನವರಿಯಿಂದ 1984ರ ಅಕ್ಟೋಬರ್‌ವರೆಗೆ ಅಧಿಕಾರದಲ್ಲಿದ್ದರು. ಅವರು ಪ್ರಧಾನಿಯಾಗಿ ಒಟ್ಟು 16 ಬಾರಿ ಹಾಗೂ ಸತತವಾಗಿ 11 ಸಲ ಆಗಸ್ಟ್ 15ರಂದು ಧ್ವಜಾರೋಹಣ ಭಾಷಣ ಮಾಡಿದ್ದರು.
ಪ್ರತಿ ವರ್ಷ ಮೋದಿ, ಸ್ವಾತಂತ್ರ್ಯ ದಿನದಂದು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪೇಟಗಳನ್ನು ಧರಿಸುತ್ತಾರೆ. ಕಳೆದ ವರ್ಷ, ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣಗಳಿಂದ ಕೂಡಿದ್ದ ರಾಜಸ್ಥಾನಿ ಲೆಹೆರಿಯಾ ಪೇಟವನ್ನು ಧರಿಸಿದ್ದರು. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ವಸ್ತ್ರದ ಸಂಕೇತವಾಗಿದೆ. 2014ರಲ್ಲಿ ಮೊದಲ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸುವ ಸಂದರ್ಭದಲ್ಲಿ ಕೆಂಪು ಜೋಧಪುರಿ ಬಂದೇಜ್ ಪೇಟವನ್ನು ಧರಿಸಿದ್ದರು. 2023ರಲ್ಲಿ ಬಂಧನಿ ಮುದ್ರಣದ ಪೇಟ, 2022ರಲ್ಲಿ ನೆಹರೂ ಜಾಕೆಟ್ ಮತ್ತು ತ್ರಿವರ್ಣದ ಪೇಟ, 2021ರಲ್ಲಿ ಕೆಂಪು ಮತ್ತು ಗುಲಾಬಿ ಮಿಶ್ರಿತ ಪೇಟ, 2020ರಲ್ಲಿ ಕೇಸರಿ ಮತ್ತು ಕೆನೆ ಬಣ್ಣ ಮಿಶ್ರಿತ ಪೇಟವನ್ನು ಧರಿಸಿದ್ದರು. ಹೀಗೆ ಪ್ರತಿ ವರ್ಷವೂ ವಿಭಿನ್ನ ರೀತಿಯ ಪೇಟ ಧರಿಸಿ ಮೋದಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಮರಳು ಕಲಾಕೃತಿಯಲ್ಲಿ 'ಆಪರೇಷನ್ ಸಿಂಧೂರ'
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದ ಸುದರ್ಶನ್ ಪಟ್ನಾಯಕ್, 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿತ ಮರಳು ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ.
ಇದೇ ವೇಳೆ, ಭಾರತೀಯ ವಾಯುಪಡೆಯ ಎರಡು Mi-17 ಹೆಲಿಕಾಪ್ಟರ್‌ಗಳು ಕೆಂಪು ಕೋಟೆಯ ಮೇಲೆ ಪುಷ್ಪಮಳೆ ಸುರಿಸಿದವು. ಒಂದು ಹೆಲಿಕಾಪ್ಟರ್ ಧ್ವಜದೊಂದಿಗೆ ಹಾರಿದರೆ, ಇನ್ನೊಂದು ಹೆಲಿಕಾಪ್ಟರ್‌ನಲ್ಲಿ ಆಪರೇಷನ್ ಸಿಂಧೂರ ಬ್ಯಾನರ್ ಅನ್ನು ಪ್ರದರ್ಶಿಸಲಾಗಿದೆ.
ಮೋದಿ ಭಾಷಣದ ಮುಖ್ಯಾಂಶಗಳು ಇಂತಿವೆ..
* ಸಂವಿಧಾನಕ್ಕಾಗಿ ತ್ಯಾಗ ಮಾಡಿದ ಮೊದಲ ಭಾರತೀಯ ಶ್ಯಾಮ ಪ್ರಸಾದ್ ಮುಖರ್ಜಿ
* ಹಿಮಾಚಲ ಪ್ರದೇಶ, ಕಾಶ್ಮೀರದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಗಳಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸುತ್ತೇನೆ.
* ಆಪರೇಷನ್ ಸಿಂಧೂರದ ವೀರ ಯೋಧರಿಗೆ ನಮನ ಸಲ್ಲಿಸುವ ದಿನವಿದು.
* ಪಹಲ್ಗಾಮ್ ದಾಳಿ ಬಳಿಕ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆಪರೇಷನ್ ಸಿಂಧೂರ ದೇಶ ಹಿಂದೆಂದೂ ನೋಡದ ಒಂದು ಕಾರ್ಯಾಚರಣೆಯಾಗಿದೆ.
* ಈ ಕಾರ್ಯಾಚರಣೆ ಮೂಲಕ ಪಾಕ್‌ನಲ್ಲಿ ಆಗಿರುವ ವಿನಾಶವು ತುಂಬಾ ದೊಡ್ಡದಾಗಿದ್ದು, ಅದರ ಬಗ್ಗೆ ಇನ್ನೂ ಹೊಸ ಹೊಸ ಮಾಹಿತಿ ಬರುತ್ತಿದೆ. ಪಾಕಿಸ್ತಾನದ ಉಗ್ರರ ನೆಲೆಗಳು, 6 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ.
* ಪರಮಾಣು ಬೆದರಿಕೆಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ: ಕೆಂಪು ಕೋಟೆಯಿಂದ ಪ್ರಧಾನಿಯವರ ಸ್ಪಷ್ಟ ಸಂದೇಶ
* ನಾವು ಈಗ ಭಯೋತ್ಪಾದಕರು ಮತ್ತು ಭಯೋತ್ಪಾದನಾ ಬೆಂಬಲಿಗರಿಗೆ ಕಡಿವಾಣ ಹಾಕಿದ್ದೇವೆ.
* ಭಯೋತ್ಪಾದಕರು ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಸಿಂಧೂ ನದಿ ಒಪ್ಪಂದ ರದ್ಧತಿಗೆ ಕುರಿತು ಮೋದಿ ಹೇಳಿದ್ದಾರೆ.
ಪ್ರತಿ ವರ್ಷ ಮೋದಿ, ಸ್ವಾತಂತ್ರ್ಯ ದಿನದಂದು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪೇಟಗಳನ್ನು ಧರಿಸುತ್ತಾರೆ.
ಕಳೆದ ವರ್ಷ, ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣಗಳಿಂದ ಕೂಡಿದ್ದ ರಾಜಸ್ಥಾನಿ ಲೆಹೆರಿಯಾ ಪೇಟವನ್ನು ಧರಿಸಿದ್ದರು. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ವಸ್ತ್ರದ ಸಂಕೇತವಾಗಿದೆ.
2014ರಲ್ಲಿ ಮೊದಲ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸುವ ಸಂದರ್ಭದಲ್ಲಿ ಕೆಂಪು ಜೋಧಪುರಿ ಬಂದೇಜ್ ಪೇಟವನ್ನು ಧರಿಸಿದ್ದರು.
2023ರಲ್ಲಿ ಬಂಧನಿ ಮುದ್ರಣದ ಪೇಟ, 2022ರಲ್ಲಿ ನೆಹರೂ ಜಾಕೆಟ್ ಮತ್ತು ತ್ರಿವರ್ಣದ ಪೇಟ, 2021ರಲ್ಲಿ ಕೆಂಪು ಮತ್ತು ಗುಲಾಬಿ ಮಿಶ್ರಿತ ಪೇಟ, 2020ರಲ್ಲಿ ಕೇಸರಿ ಮತ್ತು ಕೆನೆ ಬಣ್ಣ ಮಿಶ್ರಿತ ಪೇಟವನ್ನು ಧರಿಸಿದ್ದರು. ಹೀಗೆ ಪ್ರತಿ ವರ್ಷವೂ ವಿಭಿನ್ನ ರೀತಿಯ ಪೇಟ ಧರಿಸಿ ಮೋದಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಬೆಳಗಾವಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, ಶುಕ್ರವಾರ ಧ್ವಜಾರೋಹಣ ನೆರವೇರಿಸಿದರು.
ನಂತರ ತೆರೆದ ಜೀಪಿನಲ್ಲಿ ತೆರಳಿ, ಪರೇಡ್ ಪರಿವೀಕ್ಷಣೆ ಮಾಡಿದರು.
ಶಾಸಕ ಆಸಿಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಇತರರಿದ್ದರು.
ಕೊಡಗು: ಸುರಿಯುವ ಮಳೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ; ತಾರತಮ್ಯ ಇಲ್ಲದೇ ಪ್ರಗತಿಯತ್ತ ಚಿಂತನೆ ಮಾಡಿ- ಎನ್.ಎಸ್.ಭೋಸರಾಜು
ಮಡಿಕೇರಿ: ಇಲ್ಲಿನ ಕೋಟೆ ಮೈದಾನದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಷಣ ಮಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು, ಯಾವುದೇ ತಾರತಮ್ಯ ಇಲ್ಲದೇ ಎಲ್ಲರೂ ಒಟ್ಟುಗೂಡಿ ಪ್ರಗತಿಯತ್ತ ಚಿಂತನೆ ಮಾಡಬೇಕು ಎಂದು ಪ್ರತಿಪಾದಿಸಿದರು.
ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರು ಹಾಕಿ ಕೊಟ್ಟ ಮೇಲ್ಪಂಕ್ತಿಯಲ್ಲಿ ನಾವೆಲ್ಲ ಒಂದಾಗಿ ನಡೆಯಬೇಕಿದೆ. ಸ್ವಾತಂತ್ರ್ಯ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಯಾವುದೇ ತಾರತಮ್ಯ ಇಲ್ಲದೇ ಎಲ್ಲರೂ ಒಂದಾಗಬೇಕು ಎಂದರು.
ಇದಕ್ಕೂ ಮುನ್ನ ಅವರು ಸರ್ಕಾರ ಜಿಲ್ಲೆಯಲ್ಲಿ ಈ ವರ್ಷ ಮಾಡಿದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿದರು. ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರನ್ನು ಅವರು ನೆನೆದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಧ್ವಜಾರೋಹಣ ನೆರವೇರಿಸಿದರು. ಶಾಸಕ ಡಾ.ಮಂತರ್ ಗೌಡ ಅಧ್ಯಕ್ಷತೆ ವಹಿಸಿದ್ದರು.
ತುಮಕೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ವಾಹನದಲ್ಲಿ ತೆರಳಿ ತುಕಡಿಗಳ ಪರಿವೀಕ್ಷಣೆ ನಡೆಸಿದರು.
ಸಶಸ್ತ್ರ ಮೀಸಲು ಪೊಲೀಸ್ ತಂಡ, ನಾಗರಿಕ ಪೊಲೀಸ್ ತಂಡ, ಗೃಹರಕ್ಷಕ ದಳ, ಎನ್.ಸಿ.ಸಿ ಬಾಲಕರ ತಂಡ, ಕಲ್ಪತರು ಪಡೆ, ಪೊಲೀಸ್ ವಾದ್ಯ ವೃಂದ ಒಳಗೊಂಡಂತೆ ವಿವಿಧ ತಂಡಗಳು ಕವಾಯತಿನಲ್ಲಿ ಭಾಗವಹಿಸಿದ್ದವು. ಶಾಸಕರಾದ ಬಿ.ಸುರೇಶ್ ಗೌಡ, ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಮೊದಲಾದವರು ಪಾಲ್ಗೊಂಡಿದ್ದರು.
ರಾಯಚೂರು: ‘ಪ್ರತಿಯೊಬ್ಬರು ದೇಶ ಪ್ರೇಮ ಬೆಳೆಸಿಕೊಳ್ಳಬೇಕು ‘ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಇಲ್ಲಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಧ್ವಜಾರೋಹಣದ ನಂತರ ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಪಡೆ, ನಾಗರಿಕ ಪೊಲೀಸ್, ಮಹಿಳಾ ಪೊಲೀಸ್, ಗೃಹ ರಕ್ಷಕ ದಳ, ಎನ್‌ಸಿಸಿ ಕೆಡೆಟ್, ಸ್ಕೌಟ್ಸ್ ಮತ್ತು ಗೈಡ್ಸ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜ್, ಸರ್ಕಾರಿ ಪ್ರೌಢ ಶಾಲೆ ಹಾಗೂ ಖಾಸಗಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಮೂಹಿಕವಾಗಿ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ವಸಂತಕುಮಾರ, ರುಡಾ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ನಿತಿಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಪ್ಪ ಭಜಂತ್ರಿ, ರಾಯಚೂರು ಮಹಾನಗರಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರಾ, ರಾಯಚೂರು ಉಪ ವಿಭಾಗಾಧಿಕಾರಿ ಗಜಾನನ ಬಾಳೆ , ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಉಪಸ್ಥಿತರಿದ್ದರು.
ಮಂಗಳೂರು: ದೇಶಭಕ್ತಿ ಸ್ಫುರಿಸುವ ವಿದ್ಯಾರ್ಥಿಗಳ ಗಾಯನ, ಪೊಲೀಸ್ ತಂಡಗಳು, ಸಶಸ್ತ್ರ ಮೀಸಲು ಪಡೆ, ಕೆಎಸ್ ಆರ್ ಪಿ, ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾ ದಳದ ವಿದ್ಯಾರ್ಥಿಗಳ ಶಿಸ್ತಿನ ಪಥ ಸಂಚಲನದೊಂದಿಗೆ 79ನೇ ಸ್ವಾತಂತ್ರ್ಯೋತ್ಸವವನ್ನು ನಗರದ ನೆಹರೂ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.
ಧಾರ್ಮಿಕ ಕೇಂದ್ರಗಳು ತಿಳಿವಳಿಕೆ ನೀಡಲಿ
ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಸಚಿವ ದಿನೇಶ್ ಗುಂಡೂರಾವ್, 'ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು, ದೇವಸ್ಥಾನ, ಮಸೀದಿ, ಚರ್ಚ್ ಗಳ ಧಾರ್ಮಿಕ ಮುಖಂಡರು ತಮ್ಮ ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಜನರಿಗೆ ತಿಳಿವಳಿಕೆ ನೀಡಬೇಕು. ಸಾಮರಸ್ಯದಿಂದ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಮಾಜಕ್ಕೆ ಮನದಟ್ಟು ಮಾಡಬೇಕಾಗಿದೆ. ಕಲೆ, ನಾಟಕ, ಯಕ್ಷಗಾನ ಕ್ಷೇತ್ರಗಳಲ್ಲಿ ಸಹ ಸಾಮರಸ್ಯ ಸಂದೇಶ ಸಾರುವತ್ತ ಕಲಾವಿದರು ಹೆಚ್ಚಿನ ಗಮನ ಹರಿಸಬೇಕು. ಹಿಂಸೆಗೆ ಅವಕಾಶ ನೀಡದೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು' ಎಂದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೋಮು ಸಂಬಂಧಿತ ಘರ್ಷಣೆಗಳನ್ನು ತಪ್ಪಿಸಲು ದಕ್ಷಿಣ ಕನ್ಬಡ ಜಿಲ್ಲೆಯ ವ್ಯಾಒ್ತಯಲ್ಲಿ ವಿಶೇಷ ನಿಗ್ರಹ ಪಡೆ ರಚಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಬಾಹ್ಯ ಒತ್ತಡಕ್ಕೆ ಅವಕಾಶವಿಲ್ಲದೆ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಪೂರ್ಣ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಸ್ಟರ್ ಪ್ಲಾನ್ ನ ಮೂರನೇ ಹಂತದಲ್ಲಿ ₹400 ಕೋಟಿ ವೆಚ್ಚದಲ್ಲಿ ವಿವಿದ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಇನ್ನಿತರ ಅಗತ್ಯ ಸೌಲಭ್ಯ ಒದಗಿಸುವ ಕಾಮಗಾರಿಗಳನ್ನು ಈ ವರ್ಷ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ್ ನರ್ವಾಡೆ ಉಪಸ್ಥಿತರಿದ್ದರು.
ಕೋಲಾರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಧ್ವಜಾರೋಹಣ ನೆರವೇರಿಸಿದರು. ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ರಾಷ್ಟ್ರಗೀತೆ, ನಾಡಗೀತೆ ಬಳಿಕ ಅವರು ತೆರೆದ ಜೀಪಿನಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು. ವಿವಿಧ ದಳಗಳ ಪಥ ಸಂಚಲನ ವೀಕ್ಷಿಸಿದರು. ಬಳಿಕ ಸ್ವಾತಂತ್ರ್ಯ ಸಂದೇಶ ನೀಡಿದರು.
ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಎಂ.ಮಲ್ಲೇಶ್‍ಬಾಬು, ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಭಾಗವಹಿಸಿದ್ದರು.
ಬೀದರ್: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ನಗರದ ನೆಹರೂ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಗೌರವ ವಂದನೆ ಸ್ವೀಕರಿಸಿದರು. ಆನಂತರ ಪೊಲೀಸರು, ಗೃಹರಕ್ಷರು, ಮಹಿಳಾ ಪೊಲೀಸ್ ಪಡೆ, ಅಕ್ಕ ಪಡೆ, ಸ್ಕೌಟ್ಸ್ ಮತ್ತು ಗೈಡ್ಸ್, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಗುರುವಾರ ರಾತ್ರಿಯಿಡಿ ಮಳೆ ಸುರಿದ ಪರಿಣಾಮ ಪ್ರಮುಖ ರಸ್ತೆಗಳು, ಕ್ರೀಡಾಂಗಣದ ಕೆಲವೆಡೆ ನೀರು ಸಂಗ್ರಹಗೊಂಡಿತು. ಬೆಳಗಿನ ಜಾವ ನೀರು ತೆರವುಗೊಳಿಸಿ, ಮರಳು ಹಾಕಿ ಕ್ರೀಡಾಂಗಣ ಸಜ್ಜುಗೊಳಿಸಲಾಯಿತು. ಮಳೆ ಸಹ ಬಿಡುವು ಕೊಟ್ಟಿದ್ದರಿಂದ ಯಾವುದೇ ತೊಡಕಾಗಲಿಲ್ಲ. ಆದರೆ, ದಟ್ಟ ಕಾರ್ಮೋಡ ಆವರಿಸಿಕೊಂಡಿದೆ.
ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದೇಶದ ಅತಿದೊಡ್ಡ ಹಬ್ಬಗಳು. ಐಕ್ಯತೆ, ಅಭಿಮಾನದಿಂದ ಆಚರಿಸಲಾಗುತ್ತದೆ. ಈ ರಾಷ್ಟ್ರದ ಸೇವೆಗೆ ಸಮರ್ಪಿಸಿಕೊಳ್ಳುವ ದಿನವೂ ಹೌದು. ತ್ರಿವರ್ಣ ಧ್ವಜ ಅನೇಕರ ತ್ಯಾಗ, ಸಮರ್ಪಣೆಯ ಪ್ರತೀಕ ಎಂದರು.
ಸಂಸದ ಸಾಗರ್ ಖಂಡ್ರೆ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ್ ಬದೋಲೆ, ಎಸ್ಪಿ ಪ್ರದೀಪ್ ಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಷ್ ರೆಡ್ಡಿ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮತ್ತಿತರರು ಇದ್ದರು
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು
ಸಿಎಂ ಸಿದ್ದರಾಮಯ್ಯ ಭಾಷಣ ಪ್ರಮುಖಾಂಶ
* ಕರ್ನಾಟಕ ದಲ್ಲಿ ರಾಜ್ಯದ್ದೇ ಶಿಕ್ಷಣ ನೀತಿ, ಸುಖದೇವ ಥೋರಟ್ ಸಮಿತಿ ರಚನೆ. ವರದಿ ಜಾರಿಗೆ ಕ್ರಮವನ್ನು * 2027ರ ವೇಳೆಗೆ ಎತ್ತಿನ ಹೊಳೆ ಯೋಜನೆ ಪೂರ್ಣದ ಗುರಿ.
* ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯ ಮಾಡುದಙತೆ ಡ್ರಗ್ಸ್ ಮುಕ್ತ ರಾಜ್ಯವಾಗಿ ಘೋಷಿಸಲು ಕಾರ್ಯಕ್ರಮ.
*ಕ್ವಾಂಟಮ್ ತಂತ್ರಜ್ಞಾನ, ಎಐ ಗೆ ಒತ್ತು.ದೇಶದ ಮೊದಲ ಕ್ವಾಂಟನ್ ಮಿಷನ್ ಯೋಜನೆ ಜಾರಿ.
ಕೊಪ್ಪಳ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾಷ್ಟ್ರ ಧ್ವಜಾರೋಹಣ ನೇರವೇರಿಸಿದರು. ಬಳಿಕ ಮಾತನಾಡಿದ ತಂಗಡಗಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು.
ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ಈ ಸಲದ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ 265 ಶಾಲೆಗಳಿಗೆ ಹೊಸ ಕೊಠಡಿಗಳ ನಿರ್ಮಾಣ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಕೊಪ್ಪಳದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಹೆಚ್ಚುವರಿ ಎಸ್.ಪಿ. ಹೇಮಂತ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಯಾದಗಿರಿ: ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಶುಕ್ರವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ವಿವಿಧ ತುಕಡಿಗಳು ನೀಡಿದ ಗೌರವ ವಂದನೆಯನ್ನು ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, 'ನಮ್ಮ ಧೈರ್ಯಶಾಲಿ ನಾಯಕರು ಅಪಾಯಗಳನ್ನು ಎದುರಿಸಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ವಿದೇಶಿ ಆಳರಸರಾದ ಬ್ರಿಟಿಷರನ್ನು ದೇಶದಿಂದ ಓಡಿಸಿ ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ' ಎಂದರು.
'ದೇಶದ ಮೊದಲ ಪ್ರಧಾನಿಯಾಗಿ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದವರು ಪಂಡಿತ್ ಜವಾಹರಲಾಲ್ ನೆಹರು ಅವರು. ನೆಹರು ಅವರು ಹಾಕಿದ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಭಾರತದ ಸೇವೆ ಎಂದರೆ ನೋವನ್ನು ಅನುಭವಿಸುತ್ತಿರುವ ಲಕ್ಷಾಂತರ ಜನರ ಸೇವೆ ಮಾಡುವುದು' ಎಂದು ಹೇಳಿದರು.
'ನಮ್ಮ ಸರ್ಕಾರವು ಜನರ ಕಷ್ಟಗಳಿಗೆ ಸ್ಪಂದನೆ ಮಾಡುವ ಕೆಲಸವನ್ನು ಮಾಡುತ್ತಿದೆ. ಐದು ಗ್ಯಾರಂಟಿಗಳ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಲಾಗುತ್ತಿದೆ' ಎಂದರು.
'ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೆ, ನಮ್ಮ ಕಲ್ಯಾಣ ಕರ್ನಾಟಕಕ್ಕೆ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ಲಭಿಸಿತು. ಈ ದಿನದಲ್ಲಿ ನಾವು ಸರ್ದಾರ್ ವಲ್ಲಭಭಾಯಿ ಪಟೇಲ್, ಇನಾಮದಾರ್ ಅವರ ಕೊಡುಗೆಯನ್ನು ಸ್ಮರಿಸಬೇಕಾಗುತ್ತದೆ' ಎಂದು ಹೇಳಿದರು.
'ಸುಭದ್ರವಾದ ನಾಡನ್ನು ಕಟ್ಟವುದು ಒಬ್ಬ ಪ್ರಧಾನಿ, ಮುಖ್ಯಮಂತ್ರಿಗಳಿಂದ ಸಾಧ್ಯವಿಲ್ಲ. ಎಲ್ಲರೂ ಒಗ್ಗೂಡಿದಾಗ, ಅದರಲ್ಲಿ ಮುಖ್ಯವಾಗಿ ಯುವಕರಿಂದ ನಾಡು ಕಟ್ಟಲು ಸಾಧ್ಯ' ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್‌ಪಿ ಪೃಥ್ವಿಕ್ ಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಲಬುರಗಿ: 79ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್, ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಗರದ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರು ಗುರುವಾರ ರಾತ್ರಿ ನಿಧನರಾದ ಪ್ರಯುಕ್ತ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಸರಳವಾಗಿ ಆಯೋಜಿಸಲಾಗಿತ್ತು.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ರೇಷ್ಮೆ ಉತ್ಪನ್ನಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ಶಾಸಕಿ ಕನೀಜ್ ಫಾತಿಮಾ,
ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಮಹಾನಗರ ಪಾಲಿಕೆ ಮೇಯರ್ ವರ್ಷಾ ಜಾನೆ, ಉಪಮೇಯರ್ ತೃಪ್ತಿ ಲಾಖೆ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂಖಾನ್, ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಕೆಕೆಆರ್ ಡಿಬಿ ಕಾರ್ಯದರ್ಶಿ ನಲಿನ್ ಅತುಲ್, ಕೆಕೆಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ, ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಆಡ್ಡೂರು ಶ್ರೀನಿವಾಸಲು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ್ ಕೆ. ಅನಂದಶೀಲ ಇತರರು ಭಾಗವಹಿಸಿದ್ದರು.
ನಂತರ ನಡೆದ ಪಥಸಂಚಲನದಲ್ಲಿ ಪೊಲೀಸ್, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಅರಣ್ಯ ಪಡೆ, ಸೇವಾದಳ ಸೇರಿದಂತೆ 16 ತಂಡಗಳು ಭಾಗವಹಿಸಿದ್ದವು.
ಶರಣಬಸವಪ್ಪ ಅಪ್ಪ ಅವರ ನಿಧನದ ಪ್ರಯುಕ್ತ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಸಚಿವರು ಸಾರ್ವಜನಿಕ ಭಾಷಣ ಮಾಡಲಿಲ್ಲ.
ಹೀಗಾಗಿ 20 ನಿಮಿಷಗಳಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು.
ದಾವಣಗೆರೆ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಕ್ರೀಡಾಂಗಣದಲ್ಲಿ ಪಥಸಂಚಲನ ನಡೆಯಿತು. ಪೊಲೀಸರು, ಗೃಹರಕ್ಷರು, ಪೌರಕಾರ್ಮಿಕರು, ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ದಳ ಸೇರಿದಂತೆ ವಿವಿಧ ತುಕಡಿಗಳಿಂದ ಸಚಿವರು ಗೌರವ ವಂದನೆ ಸ್ವೀಕರಿಸಿದರು. ಮಳೆ ಬೆಳಿಗ್ಗೆಯಿಂದ ಬಿಡುವು ನೀಡಿರುವುದರಿಂದ ಸ್ವಾತಂತ್ರ್ಯೋತ್ಸವ ಕಳೆಗಟ್ಟಿತ್ತು.
‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಚಳುವಳಿ ಸ್ವಾತಂತ್ರ‍್ಯ ತರುವುದರಲ್ಲಿ ಪ್ರಮುಖ ಘಟ್ಟವಾಗಿತ್ತು. ಈ ಚಳುವಳಿ ದಾವಣಗೆರೆಯಲ್ಲಿಯೂ ನಡೆದಿತ್ತು. ನಗರದಲ್ಲಿ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದಿರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪ ಅವರು ಈ ಚಳವಳಿಯಲ್ಲಿ ಬ್ರಿಟಿಷರ ಗುಂಡಿಗೆ ಪ್ರಾಣಾರ್ಪಣೆ ಮಾಡಿ ಹುತಾತ್ಮರಾಗಿದ್ದನ್ನು ನಾವಿಂದು ನೆನಪಿಸಿಕೊಳ್ಳಬೇಕು’ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
‘ಸ್ವಾತಂತ್ರ‍್ಯವು ಕೇವಲ ರಾಜಕೀಯ ಸ್ವಾತಂತ್ರ‍್ಯವಲ್ಲ, ಅದು ಹೊಣೆಗಾರಿಕೆಯೂ ಹೌದು. ನಾವೆಲ್ಲರೂ ನಮ್ಮ ದೇಶವನ್ನು ಶಾಂತಿ, ಪ್ರಗತಿ ಮತ್ತು ಏಕತೆಯ ಮಾರ್ಗದಲ್ಲಿ ಮುಂದುವರಿಸಬೇಕಾದ ಜವಾಬ್ದಾರಿ ಹೊಂದಿದ್ದೇವೆ’ ಎಂದರು.
‘ಭಾರತವು ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುತ್ತಿದೆ. ಆದರೆ, ಭ್ರಷ್ಟಾಚಾರ, ಅಸಮಾನತೆ, ಪರಿಸರ ಮಾಲಿನ್ಯ, ನಿರುದ್ಯೋಗ ಮುಂತಾದ ಸವಾಲುಗಳನ್ನು ನಿವಾರಿಸಲು ನಾವು ಒಟ್ಟಾಗಿ ಪ್ರಯತ್ನಿಸುವ ಅಗತ್ಯವಿದೆ. ಸಂಸ್ಕೃತಿ, ಭಾಷೆ, ಪರಂಪರೆಗಳನ್ನು ಕಾಪಾಡಿಕೊಂಡು, ಅಭಿವೃದ್ಧಿಯತ್ತ ಸಾಗೋಣ. ಈ ಸ್ವಾತಂತ್ರ‍್ಯೋತ್ಸವ ದಿನದಂದು ಪ್ರತಿಯೊಬ್ಬರೂ ‘ನನ್ನ ದೇಶ, ನನ್ನ ಹೆಮ್ಮ’ ಎಂಬ ಭಾವನೆ ಹೊಂದಿ ಕಾರ್ಯನಿರ್ವಹಿಸೋಣ’ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಹಾಜರಿದ್ದರು.
ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ 79ನೇ ಸ್ವಾತಂತ್ರ್ಯ ದಿನವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ವಿಜಯಪುರ ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ
ಪಥ ಸಂಚಲನ ಪರಿವೀಕ್ಷಣೆ ಮಾಡಿ, ಗೌರವ ವಂದನೆ ಸ್ವೀಕರಿಸಿದರು.
'ನಮಗೆ ಸಿಕ್ಕಿರುವ ಸ್ವಾತಂತ್ರವು ನಮ್ಮ ಹಿರಿಯರ ನಿಸ್ವಾರ್ಥ, ತ್ಯಾಗ, ಸಂಕಲ್ಪ ಮತ್ತು ಹೋರಾಟಗಳ ಫಲವಾಗಿದೆ. ಅವರು ಮಾಡಿದ ಹೋರಾಟದಿಂದ ಇಂದು ನಾವೆಲ್ಲರೂ ಸುಖವಾಗಿದ್ದೇವೆ. ಇದನ್ನು ಎಂದಿಗೂ ಮರೆಯದೆ, ಆ ಹಿರಿಯರಿಗೆ ಕೃತಜ್ಞರಾಗಿರಬೇಕು ಮತ್ತು ಈ ಸಂದೇಶವನ್ನು ನಮ್ಮ ಕಿರಿಯ ತಲೆಮಾರಿಗೆ ಮುಟ್ಟಿಸಬೇಕು, ಇದು ನಮ್ಮೆಲ್ಲರ ಕರ್ತವ್ಯವಾಗಿದೆ' ಎಂದು ಸಚಿವರು ಹೇಳಿದರು.
ವಿಜಯಪುರ ಅಂದರೆ ಬರಪೀಡಿತ ಪ್ರದೇಶ ಎನ್ನುವ ಕಾಲ ಆಗಿ ಹೋಯಿತು. ಈಗ ಇದು ತೋಟಗಾರಿಕೆ ಜಿಲ್ಲೆ ಎಂದು ಹೆಸರಾಗಿದೆ. ಇದರ ಜೊತೆಗೆ ವಿಜಯಪುರವನ್ನು ಕೈಗಾರಿಕಾ ಸಂಸ್ಕೃತಿಯ ಜಿಲ್ಲೆಯನ್ನಾಗಿ ಮಾಡಬೇಕೆಂಬುದು ನನ್ನ ಮಹಾದಾಸೆಯಾಗಿದೆ ಎಂದರು.
ಜಿಲ್ಲೆಯನ್ನು ಇಂಧನ ಕ್ಷೇತ್ರದ ಸಾಧನಗಳು, ಮೆಷನರಿ ಮತ್ತು ಎಕ್ವಿಪ್ ಮೆಂಟ್, ನಾನ್ ಮೆಟಲಿಕ್ ಖನಿಜ ಉತ್ಪನ್ನಗಳು, ಕೃಷಿ ಮತ್ತು ಕೃಷಿ ಆಧಾರಿತ ಉತ್ಪನ್ನಗಳು, ನ್ಯೂಟ್ರಾಸುಟಿಕಲ್ ಮೆಡಿಸಿನ್ ಮತ್ತು ಬೊಟಾನಿಕಲ್ ಉತ್ಪನ್ನಗಳು, ವಿಶೇಷ ಅಲಾಯ್ ಮತ್ತು ಲೋಹೋತ್ಪನ್ನ ವಲಯಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ವಿಜಯಪುರ ಜಿಲ್ಲೆಯಲ್ಲಿ ₹ 42 ಸಾವಿರ ಕೋಟಿ ಹೂಡಿಕೆ ನಡೆಯಲಿದೆ ಎಂದು ಹೇಳಿದರು.
ನೃತ್ಯ ಪ್ರದರ್ಶನ: ಶಾಲಾ, ಕಾಲೇಜು ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.
ಜಿಲ್ಲೆಯ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮೇಯರ್ ಎಸ್.ಎಂ.ಕರಡಿ, ಉಪ ಮೇಯರ್ ಸುಮಿತ್ರಾ ಜಾಧವ್, ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪಂಚಾಯ್ತಿ ಸಿಇಒ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಇದ್ದರು.
ಚಾಮರಾಜನಗರ; ಸ್ವಾತಂತ್ರ್ಯೋತ್ಸವ ಸಂಭ್ರಮ ಚಾಮರಾಜನಗರ: ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಪೊಲೀಸರ ಹಾಗೂ ಕಾಲೇಜು ವಿದ್ಯಾರ್ಥಿಗಳ ಪಥ ಸಂಚಲನ ಗಮನ ಸೆಳೆಯಿತು. ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.
ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಜವಾಬ್ದಾರಿ ಹೆಚ್ಚು ಇದೆ. ಯುವ ಜನರು ಮಾದಕ ಪದಾರ್ಥಗಳ ಗೀಳು ಬೆಳೆಸಿ ಕೊಳ್ಳಬಾರದು ಎಂದು ಸಚಿವ ಲಾಡ್ ಹೇಳಿದರು. ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸಹಿತ ಎಲ್ಲ ಧರ್ಮದವರು ಒಂದಾಗಿ ಬಾಳಬೇಕು ಎಂದರು. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಮಹಾನಗರ ಪೋಲೀಸ್ ಕಮಿಷನರ್ ಎನ್. ಶಶಿಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಇದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೆಂಪು ಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬರೋಬ್ಬರಿ 1 ಗಂಟೆ 43 ನಿಮಿಷಗಳ ಕಾಲ (103 ನಿಮಿಷ) ಭಾಷಣ ಮಾಡಿದ್ದಾರೆ. ಈ ಮೂಲಕ ದೀರ್ಘ ಭಾಷಣ ಮಾಡಿದ ಪ್ರಧಾನಿ ಎನಿಸಿಕೊಂಡಿದ್ದಾರೆ.
ಮೈಸೂರು: ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆಯು ನಗರದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಧ್ವಜಾರೋಹಣ ಮಾಡಿದರು.
ಪೊಲೀಸ್ ಹಾಗೂ ವಿದ್ಯಾರ್ಥಿಗಳ 25 ತಂಡ ಪಥಸಂಚಲನ ನಡೆಸಿದವು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿಗೀತೆಗೆ ಹೆಜ್ಜೆ ಹಾಕಿದರು. ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತರಿಗೆ ಎಚ್.ಸಿ.ಮಹದೇವಪ್ಪ ಬಹುಮಾನ ವಿತರಿಸಿದರು. ಬಳಿಕ ಶುಭ ಸಂದೇಶ ನೀಡಿದರು.
ಶಾಸಕ ತನ್ವೀರ್ ಸೇಠ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ವಸ್ತುಪ್ರದರ್ಶನ ಪ್ರಾದಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಸಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್, ಡಿಐಜಿಪಿ ಡಾ.ಬೋರೆಲಿಂಗಯ್ಯ,
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಡಿಸಿಪಿಗಳಾದ ಸುಂದರ್ ರಾಜ್, ಬಿಂದು ರಾಣಿ, ಎಎಸ್ಪಿ ಮಲ್ಲಿಕ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.