ಮುಂಬೈ: ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆಯವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿರುವುದು ‘ಮಹಾ ವಿಕಾಸ ಆಘಾಡಿ’ (ಎಮ್‌ವಿಎ) ಮೈತ್ರಿಕೂಟದಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಸುದ್ದಿಗಾರರೊಂದಿಗೆ ದೆಹಲಿಯಲ್ಲಿ ಬುಧವಾರ ಮಾತನಾಡಿದ ಶಿವಸೇನಾ (ಉದ್ಧವ್ ಬಣ) ವಕ್ತಾರ ಸಂಜಯ್ ರಾವುತ್, ‘ಅಮಿತ್ ಶಾ ಅವರ ನೆರವಿನಿಂದ, ಮಹಾರಾಷ್ಟ್ರದ ಎಂವಿಎ ಸರ್ಕಾರವನ್ನು ಉರುಳಿಸಿದ ಹಾಗೂ ಶಿವಸೇನಾ ಪಕ್ಷವನ್ನು ಒಡೆದ ‘ದೇಶದ್ರೋಹಿ’ ಏಕನಾಥ ಶಿಂದೆ ಅವರನ್ನು ಪವಾರ್ ಅವರು ಪ್ರಶಂಸಿಸಿದ್ದಾರೆ. ಪವಾರ್ ಅವರಿಂದ ಇಂಥದ್ದನ್ನು ನಾವು ನಿರೀಕ್ಷಿಸಿರಲಿಲ್ಲ’ ಎಂದು ಬುಧವಾರ ಹೇಳಿದ್ದಾರೆ.
‘ಪವಾರ್ ಅವರು ಶಿಂದೆಯವರನ್ನು ಹೊಗಳಿದ್ದರೂ, ಅದು ಪರೋಕ್ಷವಾಗಿ ಅಮಿತ್ ಶಾ ಅವರನ್ನು ಹೊಗಳಿದಂತಿದೆ. ಪವಾರರ ಈ ನಡೆಯಿಂದಾಗಿ ನಾವು ತಲೆತಗ್ಗಿಸುವಂತಾಗಿದೆ’ ಎಂದು ರಾವುತ್ ಅವರು ಹೇಳಿದ್ದಾರೆ.
‘ಶರದ್ ಪವಾರ್ ಅವರು ದೆಹಲಿಯಲ್ಲಿ ನಡೆಯಲಿರುವ ‘ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನ’ದ ಭಾಗವಾಗಿ ಈ ಮಾತುಗಳನ್ನಾಡಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ರಾವುತ್ ಅವರು ತಮ್ಮ ಅಭಿಪ್ರಾಯವನ್ನು ಹೇಳಿರಬಹುದು’ ಎಂದು ಎನ್‌ಸಿಪಿ (ಎಸ್‌ಪಿ) ಸಂಸದ ಅಮೋಲ್ ಕೊಲ್ಹೆ ಪ್ರತಿಕ್ರಿಯಿಸಿದ್ದಾರೆ.
ಏಕನಾಥ ಶಿಂದೆ ಅವರು ‘ಮಹಾದಜಿ ಶಿಂದೆ ರಾಷ್ಟ್ರ ಗೌರವ ಪುರಸ್ಕಾರ’ಕ್ಕೆ ಭಾಜನರಾಗಿದ್ದು, ದೆಹಲಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶರದ್ ಪವಾರ್ ಅವರು ಪ್ರಶಸ್ತಿ ಪ್ರದಾನ ಮಾಡಿ, ಪ್ರಶಂಸೆಯ ಮಾತುಗಳನ್ನಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.