ADVERTISEMENT

ಫೇಸ್‌ಬುಕ್‌ ವಿವಾದ: ಸಂಸದೀಯ ಸಮಿತಿಯಿಂದ ತರೂರ್‌ ಕೈಬಿಡಲು ಬಿಜೆಪಿ ಸಂಸದರ ಪತ್ರ

ಪಿಟಿಐ
Published 20 ಆಗಸ್ಟ್ 2020, 12:21 IST
Last Updated 20 ಆಗಸ್ಟ್ 2020, 12:21 IST
ಕಾಂಗ್ರೆಸ್‌ ಸಂಸದ ಶಶಿ ತರೂರ್‌
ಕಾಂಗ್ರೆಸ್‌ ಸಂಸದ ಶಶಿ ತರೂರ್‌    

ದೆಹಲಿ:ಭಾರತದಲ್ಲಿ ಫೇಸ್‌ಬುಕ್‌ ಆಡಳಿತ ಪಕ್ಷದ ಮುಖಂಡರ ದ್ವೇಷ ಭಾಷಣಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ ಎಂಬ ಮಾಧ್ಯಮವೊಂದರ ವರದಿಯ ನಡುವೆಯೇ, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರನ್ನು ಸಂಸತ್‌ನ ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಬೇಕು ಎಂಬ ಕೂಗು ಗುರುವಾರ ಜೋರಾಗಿದೆ.

ತರೂರ್‌ ಅವರನ್ನು ಸ್ಥಾಯಿ ಸಮಿತಿಯಿಂದ ತೆಗೆದುಹಾಕುವಂತೆ ಒತ್ತಾಯಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಬುಧವಾರ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಅದರ ಬೆನ್ನಿಗೇ, ಮಾಜಿ ಸಚಿವ ರಾಜ್ಯವರ್ಧನ್ ರಾಥೋಡ್ ಕೂಡ ಗುರುವಾರ ಪತ್ರವೊಂದನ್ನು ಬರೆದಿದ್ದಾರೆ.

ADVERTISEMENT

‘ಆಡಳಿತ ಪಕ್ಷದ ಮುಖಂಡರ ದ್ವೇಷ ಭಾಷಣಗಳನ್ನು ಫೇಸ್‌ಬುಕ್‌ ನಿರ್ಲಕ್ಷಿಸಿದೆ. ದ್ವೇಷ ಭಾಷಣಕ್ಕೆ ಸಂಬಂಧಿಸಿದ ಯಾವುದೇ ಕ್ರಮಗಳನ್ನು ಬಿಜೆಪಿ ವಿರುದ್ಧ ಕೈಗೊಳ್ಳಬಾರದು ಎಂದು ಸಂಸ್ಥೆಯ ಹಿರಿಯ ಅಧಿಕಾರಿ ಅಂಕಿದಾಸ್‌ ಎಂಬುವವರು ಸಿಬ್ಬಂದಿಗೆ ಸೂಚಿಸಿದ್ದರು. ಭಾರತದಲ್ಲಿ ಸರಾಗವಾಗಿ ವ್ಯವಹಾರ ನಡೆಸುವ ಸಲುವಾಗಿ ಹೀಗೆ ಮಾಡಲಾಗಿತ್ತು,’ ಎಂದು ಅಮೆರಿಕದ ‘ವಾಲ್‌ಸ್ಟ್ರೀಟ್‌ ಜರ್ನಲ್‌’ ಪತ್ರಿಕೆ ವರದಿ ಮಾಡಿತ್ತು. ಇದೇ ಆಧಾರದಲ್ಲಿ ಮಾತನಾಡಿದ್ದ ಶಶಿ ತರೂರ್‌ ಅವರು, ಫೇಸ್‌ಬುಕ್‌ ಅನ್ನು ವಿಚಾರಣೆಗೆ ಕರೆಯುವುದಾಗಿ ಟ್ವೀಟ್‌ ಮಾಡಿದ್ದರು.

ಸಂಸದೀಯ ಸಮಿತಿಯ ಎದುರು ವಿಷಯವನ್ನು ಸಮಾಲೋಚನೆ ಮಾಡದೇ, ಫೇಸ್‌ಬುಕ್‌ ಅನ್ನು ವಿಚಾರಣೆಗೆ ಕರೆಯುವುದಾಗಿ ಇಂಗಿತ ವ್ಯಕ್ತಪಡಿಸಿರುವ ತರೂರ್‌ ಅವರ ನಡೆ ತಪ್ಪು. ಈ ಮೂಲಕ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿ ಬಿಜೆಪಿ ನಾಯಕರು ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

‘ಯಾರನ್ನು ವಿಚಾರಣೆಗೆ ಕರೆಯಲಾಗುತ್ತದೆ, ಸಭೆಯ ಅಜೆಂಡಾ ಏನು ಎಂಬುದನ್ನು ತರೂರ್‌ ಸಂಪೂರ್ಣ ಮುಚ್ಚಿಟ್ಟು ಮಾತನಾಡಿದ್ದಾರೆ. ಇದು ಲೋಕಸಭೆಯ ಪ್ರಕ್ರಿಯೆಗೆ ವಿರುದ್ಧವಾದುದ್ದು. ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರ ಮಾಧ್ಯಮ ಹೇಳಿಕೆಗಳು ಸಮಿತಿಯ ಸದಸ್ಯರು ಮತ್ತು ಸಮಿತಿಯನ್ನು ದುರ್ಬಲಗೊಳಿಸುವಂತದ್ದು. ಈ ಕುರಿತು ನಾನು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರದ ಮೂಲಕ ತಿಳಿಸಿದ್ದೇನೆ,’ ಎಂದು ಸಮಿತಿಯಲ್ಲಿ ಸದಸ್ಯರೂ ಆಗಿರುವ ರಾಥೋಡ್ ಹೇಳಿದರು.

‘ದೇಶದ ನಾಗರಿಕರ ಹಕ್ಕುಗಳ ರಕ್ಷಣೆ ವಿಚಾರವಾಗಿ ಯಾರನ್ನಾದರೂ ಕರೆದು ವಿಚಾರಣೆ ಮಾಡಬೇಕೆಂದು ಸಮಿತಿ ಭಾವಿಸಿದರೆ, ಅದು ಯಾರನ್ನು ಬೇಕಾದರೂ ಕರೆದು ವಿಚಾರಣೆ ನಡೆಸಬಹುದು. ಅದರಲ್ಲಿ ನಮ್ಮ ತಕರಾರು ಏನೂ ಇಲ್ಲ. ಆದರೆ, ಯಾರನ್ನು ಕರೆಯಲು ಸಮಿತಿ ಬಯಸುತ್ತಿದ್ದೆಯೇ ಆ ವಿಚಾರವು ಸಮಿತಿಯ ಸದಸ್ಯರ ಎದುರು ಮೊದಲು ಚರ್ಚೆಗೆ ಒಳಗಾಗಬೇಕು,’ ಎಂದು ರಾಥೋಡ್‌ ಹೇಳಿದ್ದಾರೆ.

ತರೂರ್‌ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯವರ್ಧನ ರಾಥೋಡ್‌ ಮತ್ತು ನಿಶಿಕಾಂತ್‌ ದುಬೆ ಇಬ್ಬರೂ ಸ್ಪೀಕರ್‌ಗೆ ದೂರು ಸಲ್ಲಿಸಿದ್ದು, ನಿಯಮಗಳ ಉಲ್ಲಂಘನೆಯ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.